ಪರಿಹಾರ ಪ್ಯಾಕೇಜ್​ಗೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್ | MK Stalin

MK Stalin Narendra Modi
Published on

MK Stalin: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ಆಮದುಗಳ ಮೇಲಿನ ಅಮೆರಿಕದ ಸುಂಕ ಹೆಚ್ಚಳವು ರಾಜ್ಯದ ರಫ್ತು ಆಧಾರಿತ ಆರ್ಥಿಕತೆಗೆ ತೀವ್ರ ಹೊಡೆತ ನೀಡಬಹುದು ಮತ್ತು ಲಕ್ಷಾಂತರ ಜೀವನೋಪಾಯವನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಎಚ್ಚರಿಸಿದ್ದಾರೆ.

ಅಮೆರಿಕಾದ ಹೆಚ್ಚುವರಿ ಸುಂಕ ವಿಧಿಸಿರುವುದರಿಂದ ದೇಶದ ರಫ್ತುದಾರರನ್ನು ರಕ್ಷಿಸಲು, ಸಮಗ್ರ ರಾಷ್ಟ್ರೀಯ ಪರಿಹಾರ ಪ್ಯಾಕೇಜ್ ಅನ್ನು ರೂಪಿಸುವುದರ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ತ್ವರಿತಗೊಳಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಕಳೆದ ವರ್ಷ ಭಾರತದ ಒಟ್ಟು ಸರಕು ರಫ್ತಿನ 433.6 ಶತಕೋಟಿ ಡಾಲರ್‌ಗಳಲ್ಲಿ ಶೇ. 20 ರಷ್ಟು ಅಮೆರಿಕಕ್ಕೆ ಹೋಗಿದ್ದು, ಅದರಲ್ಲಿ ತಮಿಳುನಾಡಿನ ಪಾಲು ಹೆಚ್ಚಿದೆ ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ರೀತಿಯ ಅವಲಂಬನೆ ತಮಿಳುನಾಡಿನ ಮೇಲೆ ಪರಿಣಾಮ ಬೀರುಲಿದ್ದು, ಜವಳಿ, ಉಡುಪು, ಯಂತ್ರೋಪಕರಣಗಳು, ಆಟೋ ಘಟಕಗಳು, ಚರ್ಮ, ಸಮುದ್ರ ಉತ್ಪನ್ನಗಳು ಮತ್ತು ರಾಸಾಯನಿಕಗಳಂತಹ ಎಲ್ಲಾ ಕಾರ್ಮಿಕ ವಲಯಗಳು ತೊಂದರೆ ಎದುರಿಸಬೇಕಾಗುತ್ತದೆ ಎಂದು ಅಳುಲು ತೋಡಿಕೊಂಡರು.

ನಮ್ಮ ರಫ್ತುಗಳು ಅಮೆರಿಕದ ಮಾರುಕಟ್ಟೆಗೆ ಆಳವಾಗಿ ಸಂಬಂಧ ಹೊಂದಿರುವುದರಿಂದ, ಬೇರೆ ರಾಜ್ಯಗಳಿಗಿಂತ ತಮಿಳುನಾಡಿಗೆ ಹೆಚ್ಚಿನ ಹೊಡೆತ ಬೀಳಲಿದ್ದು, 75 ಲಕ್ಷ ಜನರಿಗೆ ಉದ್ಯೋಗ ನೀಡುವ ಮತ್ತು ಭಾರತದ ಜವಳಿ ರಫ್ತಿನಲ್ಲಿ ಶೇ. 28 ರಷ್ಟು ಕೊಡುಗೆ ನೀಡುವ ಜವಳಿ ವಲಯವನ್ನೇ ಪ್ರಮುಖವಾಗಿ ಉಲ್ಲೇಖಿಸಿರುವ ಸ್ಟಾಲಿನ್, ಪ್ರಸ್ತುತ ಶೇ. 25 ರಷ್ಟು ಅಮೆರಿಕದ ಸುಂಕವನ್ನು ಶೇ. 50 ಕ್ಕೆ ಹೆಚ್ಚಿಸಿದರೆ ಸುಮಾರು 30 ಲಕ್ಷ ಉದ್ಯೋಗಿಗಳು ಅಪಾಯಕ್ಕೆ ಸಿಲುಕುತ್ತಾರೆ ಎಂದರು.

ತಮಿಳುನಾಡಿನ ಉತ್ಪಾದನಾ ವಲಯವು ಹಿಂದೆಂದೂ ನೋಡಿರದ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂಬ ಭರವಸೆ ನೀಡಿದರು. ಇತ್ತೀಚೆಗೆ ಬ್ರೆಜಿಲ್ ತನ್ನ ರಫ್ತುದಾರರಿಗೆ ಸಹಾಯ ಮಾಡಲು ತೆರಿಗೆ ಮುಂದೂಡಿಕೆ ಮತ್ತು ಸಾಲಗಳನ್ನು ಘೋಷಿಸಿದ ರೀತಿಯಲ್ಲಿಯೇ ಕೇಂದ್ರ ಸರ್ಕಾರವು ಪರಿಹಾರ ಪ್ಯಾಕೇಜ್‌ ನಿಡಬೇಕು ಎಂದು ಮನವಿ ಮಾಡಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net