ಆನ್​ಲೈನ್ ರಮ್ಮಿ ನಿಷೇಧ- ಆಯೋಜಕರಿಗೆ ಜೈಲು ಖಚಿತ!

mobile phone
Published on

ಚೆನ್ನೈ: ಆನ್​ಲೈನ್ ಜೂಜು ಎನಿಸಿಕೊಂಡಿರುವ ಎಲ್ಲ ಗೇಮ್ಸ್​ಗಳನ್ನೂ ತಮಿಳುನಾಡು ಸರ್ಕಾರ ನಿಷೇಧಿಸಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕೊಯಮತ್ತೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆನ್​ಲೈನ್ ರಮ್ಮಿ ಆಡಿ, ಆ ಜೂಜಿನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರ್ಕಾರದ ಗಮನದಲ್ಲಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ರಚಿಸಲಾಗುತ್ತಿದೆ. ಇದರ ಪ್ರಕಾರ, ಈ ಆಟದಲ್ಲಿ ಭಾಗಿಯಾಗುವವರನ್ನು ಅಪರಾಧಿಗಳೆಂದು ಪರಿಗಣಿಸಿ ಅವರಿಗೆ ಜೈಲು ಶಿಕ್ಷೆ ವಿಧಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಆಟ ನಿಷೇಧಿಸಬೇಕು ಎಂದು ಸಾರ್ವಜನಿಕ ವಲಯದಿಂದ ಸಾಕಷ್ಟು ಮನವಿಗಳು ಬಂದಿವೆ. ಇದನ್ನು ಸರ್ಕಾರ ಪರಿಗಣಿಸಿದೆ ಎಂದು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ.

ಇಂಟರ್​ನೆಟ್ ಬಳಕೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ಇದರ ಸಮರ್ಪಕ ಬಳಕೆಯ ಅರಿವಿಲ್ಲದೆ ವಿಶೇಷವಾಗಿ ಯುವಕರು ತಮ್ಮ ಬಾಳನ್ನು ಹಾಳುಮಾಡಿಕೊಳ್ಳತೊಡಗಿದ್ದಾರೆ. ಆನ್​ಲೈನ್ ರಮ್ಮಿ ಮುಂತಾದ ಗೇಮ್ಸ್ ಮನಸೆಳೆಯವಂತೆ ಇದ್ದು, ಅದು ಬದುಕನ್ನೇ ಹಾಳು ಮಾಡಿ ಆತ್ಮಹತ್ಯೆಗೆ ಕಾರಣವಾಗುತ್ತಿದೆ ಎಂದು ಪಳನಿಸ್ವಾಮಿ ಕಳವಳ ವ್ಯಕ್ತಪಡಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net