

ಚೆನ್ನೈ: ರಾಜ್ಯದಲ್ಲಿ 9, 10 ಮತ್ತು 11ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ಮಾಡಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎ.ಕೆ.ಪಳನಿಸ್ವಾಮಿ ಘೋಷಿಸಿದ್ದಾರೆ. ಅದರ ಜತೆ ನಿವೃತ್ತಿ ವಯಸ್ಸನ್ನು 59 ವರ್ಷದಿಂದ 60 ವರ್ಷಕ್ಕೆ ಏರಿಸಿರುವುದಾಗಿ ಅವರು ತಿಳಿಸಿದ್ದಾರೆ.
2020-21ನೇ ಸಾಲಿನಲ್ಲಿ 9, 10 ಮತ್ತು 11ನೇ ತರಗತಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆಯೇ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗುವುದು. ಇದರ ಅನುಷ್ಠಾನದ ಕುರಿತಾಗಿ ಶೀಘ್ರವೇ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಲಾಗುವುದು ಎಂದು ಪಳನಿಸ್ವಾಮಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು ಈ ಮಾತನ್ನು ಹೇಳಿದ್ದಾರೆ. ಕರೊನಾ ನಂತರ ಜನವರಿಯಿಂದ 10 ಮತ್ತು 12ನೇ ತರಗತಿಗಳು ಆರಂಭವಾಗಿದ್ದು, ಇತ್ತೀಚೆಗಷ್ಟೇ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಕರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇಷ್ಟು ವರ್ಷಗಳ ಕಾಲ 59 ವರ್ಷಕ್ಕೆ ನಿವೃತ್ತಿ ನೀಡಲಾಗುತ್ತಿತ್ತು. ಇನ್ನು ಮುಂದೆ ಅದನ್ನು 60 ವರ್ಷಕ್ಕೆ ಏರಿಸಲಾಗುವುದು. ಮೇ 31, 2021ರಂದು ಸೇನೆಯಿಂದ ನಿವೃತ್ತರಾಗುತ್ತಿರುವ ಎಲ್ಲ ನೌಕರರಿಗೂ ಈ ಹೊಸ ನಿಯಮ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ