

ವಾಷಿಂಗ್ಟನ್: ಪ್ರಾಣಿಗಳು ಎರಡು ತಲೆಯೊಂದಿಗೆ ಹುಟ್ಟುವುದು, ಒಂದು ಕಾಲು ಹೆಚ್ಚಾಗಿ ಹುಟ್ಟುವಂತಹ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಈ ನಾಯಿ ಮಾತ್ರ ಇನ್ನೂ ವಿಶೇಷ. ಈ ನಾಯಿಗೆ ಇರೋದು ಆರು ಕಾಲು ಹಾಗೆಯೇ ಎರಡು ಬಾಲ...
ಅಮೆರಿಕದ ಒಕ್ಲಹೋಮದಲ್ಲಿ ಇಂತಹ ವಿಶೇಷ ನಾಯಿ ಮರಿಯೊಂದು ಫೆಬ್ರವರಿ 16ರಂದು ಹುಟ್ಟಿದೆ. ಈ ನಾಯಿಗೆ ಸ್ಕಿಪ್ಪರ್ ಎನ್ನುವ ಹೆಸರನ್ನಿಡಲಾಗಿದೆ. ಹುಟ್ಟಿದಾಕ್ಷಣ ಸ್ಕಿಪ್ಪರ್ ದೇಹ ತಣ್ಣಗಿದ್ದಿದ್ದರಿಂದಾಗಿ ಅದರ ಮಾಲೀಕ ಭಯಪಟ್ಟು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಪರಿಶೀಲನೆ ನಡೆಸಿದ ಪಶು ವೈದ್ಯರು ನಾಯಿ ಮರಿ ಸಂಪೂರ್ಣವಾಗಿ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ಇದೊಂದು ಪವಾಡ ರೂಪಿ ನಾಯಿಮರಿ ಎಂದು ಹೇಳಿಕಳುಹಿಸಿದ್ದಾರೆ.
ಅಂದ ಹಾಗೆ ಸ್ಕಿಪ್ಪರ್ ಬಾರ್ಡರ್ ಕೋಲಿ ಮತ್ತು ಆಸ್ಟ್ರೇಲಿಯನ್ ಶೆಫರ್ಡ್ ತಳಿ ನಾಯಿಗಳ ಅಡ್ಡ ತಳಿಯಾಗಿದೆ. ಸ್ಕಿಪ್ಪರ್ನೊಂದಿಗೆ ಇನ್ನೂ ಎಂಟು ನಾಯಿ ಮರಿಗಳಿಗೆ ಅದರ ತಾಯಿ ಜನ್ಮ ನೀಡಿದೆ. ಹೆಣ್ಣು ನಾಯಿಯಾಗಿರುವ ಸ್ಕಿಪ್ಪರ್ಗೆ 2 ಶ್ರೋಣಿ, 2 ಮೂರ್ತ ವಿಸರ್ಜನಾ ಅಂಗ, 2 ಸಂತಾನೋತ್ಪತ್ತಿ ವ್ಯವಸ್ಥೆಗಳು, 2 ಬಾಲಗಳು ಮತ್ತು 6 ಕಾಲುಗಳಿವೆ. ಸಾಮಾನ್ಯವಾಗಿ ಈ ರೀತಿ ವಿಚಿತ್ರವಾಗಿ ಹುಟ್ಟುವ ಪ್ರಾಣಿಗಳು ಕೇವಲ ನಾಲ್ಕು ದಿನ ಬದುಕಬಲ್ಲವು. ಆದರೆ ಸ್ಕಿಪ್ಪರ್ ಸಂಪೂರ್ಣ ಆರೋಗ್ಯವಾಗಿರುವ ಹಿನ್ನೆಲೆಯಲ್ಲಿ ಅದು ಹೆಚ್ಚು ವರ್ಷ ಬದುಕುವ ಭರವಸೆ ಇದೆ ಎಂದಿದ್ದಾರೆ ಪಶು ವೈದ್ಯರು. (ಏಜೆನ್ಸೀಸ್)