

ಚೆನ್ನೈ: ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಗೆ ಪರ್ಯಾಯವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶುಕ್ರವಾರ ರಾಜ್ಯ ಶಿಕ್ಷಣ ನೀತಿ(ಎಸ್ಇಪಿ) ಬಿಡುಗಡೆ ಮಾಡಿದರು. ಜಸ್ಟಿಸ್ ಮುರುಗೇಶನ್ ನೇತೖತ್ವದ 14 ಸದಸ್ಯರ ಸಮಿತಿ ರೂಪಿಸಿರುವ ಎಸ್ಇಪಿ, ತ್ರಿಭಾಷಾ ಸೂತ್ರ ಸಹಿತ ಎನ್ಇಪಿಯ ಅನೇಕ ನೀತಿಗಳನ್ನು ತಿರಸ್ಕರಿಸಿದೆ. ದ್ವಿಭಾಷಾ ನೀತಿಯನ್ನು ಉಳಿಸಿಕೊಂಡಿರುವ ನೀತಿಯು ವಿಜ್ಞಾನ,ಕೃತಕ ಬುದ್ಧಿಮತ್ತೆ (ಎಐ) ಮತ್ತು ಇಂಗ್ಲಿಷ್ಗೆ ಆದ್ಯತೆ ನೀಡಿದೆ.
ರಾಜ್ಯದ ಹೊಸ ಶಿಕ್ಷಣ ನೀತಿಯನ್ನು ರೂಪಿಸಲು 2022ರಲ್ಲಿ ನಿವೖತ್ತ ನ್ಯಾಯಮೂರ್ತಿ ಮುರುಗೇಶನ್ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ 2024ರ ಜುಲೈನಲ್ಲಿ ಮುಖ್ಯಮಂತ್ರಿಗೆ ಶಿಫಾರಸುಗಳನ್ನು ಸಲ್ಲಿಸಿದ್ದು, ಅದನ್ನೀಗ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಕನ್ಸಾಲಿಡೇಟೆಡ್ ಅಂಕ: ಕಲೆ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬದಲು 11 ಮತ್ತು 12ನೇ ತರಗತಿಗಳ ಕ್ರೋಡೀಕೃತ ಅಂಕಗಳನ್ನು ಪರಿಗಣಿಸಲು ಮುರುಗೇಶನ್ ಸಮಿತಿ ಶಿಫಾರಸು ಮಾಡಿದೆ. 3, 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಎನ್ಇಪಿ ಪ್ರಸ್ತಾಪನೆಯು ಪ್ರತಿಗಾಮಿ, ಸಾಮಾಜಿಕ ನ್ಯಾಯವಿರೋಧಿ ಎಂದು ಎಸ್ಇಪಿ ವರ್ಣಿಸಿದೆ. ಅದು ಡ್ರಾಪೌಟ್ ಪ್ರಮಾಣ ಹೆಚ್ಚಳ ಹಾಗೂ ಶಿಕ್ಷಣದ ಖಾಸಗೀಕರಣಕ್ಕೆ ಇಂಬು ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.