

ದೇಶದಲ್ಲಿ ನಾಲ್ಕನೇ ಹಂತದ ಅನ್ಲಾಕ್ ಪ್ರಕ್ರಿಯೆ ಜಾರಿಯಾಗುತ್ತಿದೆ. ಸಭೆ-ಸಮಾರಂಭಗಳಿಗೆ, ಮೆಟ್ರೋ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೀಗೆ ಒಂದೊಂದೇ ಹಂತದಲ್ಲಿ ಹೆಚ್ಚೆಚ್ಚು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿ ಕೊಡುತ್ತಿದೆ.
ನಿನ್ನೆಯಷ್ಟೇ ಅನ್ಲಾಕ್-4ರ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದೆ. ಅದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಸೆಪ್ಟೆಂಬರ್ 30ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಸೆಪ್ಟೆಂಬರ್ 30ರವರೆಗೆ ಅಂದರೆ ಇನ್ನೂ ಒಂದು ತಿಂಗಳು ಲಾಕ್ಡೌನ್ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಇ.ಕೆ.ಪಳಿನಿಸ್ವಾಮಿ ಇಂದು ಘೋಷಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ (ಎಸ್ಟಿಪಿಐ) ನಲ್ಲಿ ಡಿಪ್ಲೊಮಾ, ಪದವಿ ಆದವರಿಗೆ ಉದ್ಯೋಗ
ತಮಿಳುನಾಡಿನಲ್ಲಿ ಇಷ್ಟು ದಿನ ಇದ್ದಿದ್ದ ಲಾಕ್ಡೌನ್ ನಿಯಮಗಳಲ್ಲಿ ತುಸು ಸಡಿಲಿಕೆ ಮಾಡಲಾಗಿದ್ದರೂ ಪೂರ್ತಿ ತೆರವು ಗೊಳಿಸುವುದಿಲ್ಲ. ಆದರೆ ರಾಜ್ಯದ ಆರ್ಥಿಕತೆ ದೃಷ್ಟಿಯಿಂದ, ಜನಜೀವನವನ್ನು ನಿಧಾನವಾಗಿ ಸಹಜ ಸ್ಥಿತಿಗೆ ತರುವ ಸಲುವಾಗಿ ಲಾಕ್ಡೌನ್ ನಿಯಮಗಳಲ್ಲಿ ಕೆಲವು ಸಡಿಲಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರತಿ ಭಾನುವಾರ ಲಾಕ್ಡೌನ್ ಇರುವುದಿಲ್ಲ. ತಮಿಳುನಾಡಿನಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಕಡೆಗೆ ಹೋಗಲು ಯಾವುದೇ ಪಾಸ್ ಅಗತ್ಯವಿಲ್ಲ. ಶಾಲಾಕಾಲೇಜು, ಸಿನಿಮಾ ಹಾಲ್ಗಳು, ಪ್ರಾಣಿಸಂಗ್ರಹಾಲಯ, ಮ್ಯೂಸಿಯಂ, ಪ್ರವಾಸಿ ಸ್ಥಳಗಳೆಲ್ಲ ಬಂದ್ ಇರುತ್ತವೆ. ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಸಭೆ, ಸಮಾರಂಭಗಳನ್ನು ನಡೆಸಲು ಅವಕಾಶ ಇಲ್ಲ.
ಇನ್ನುಳಿದಂತೆ ಅಂಗಡಿ, ಮಾಲ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಅಲ್ಲೆಲ್ಲ ಕೊವಿಡ್-19 ಶಿಷ್ಟಾಚಾರಗಳ ಪಾಲನೆಯನ್ನು ಅಗತ್ಯವಾಗಿ ಮಾಡಬೇಕು ಎಂದು ತಮಿಳುನಾಡು ಲಾಕ್ಡೌನ್ ಮಾರ್ಗಸೂಚಿಯಲ್ಲಿ ತಿಳಿಸಿದೆ. (ಏಜೆನ್ಸೀಸ್)