'ಇಲ್ಲಿಲ್ಲ ಯಾವುದೇ ಅನ್​​ಲಾಕ್​...ಅಕ್ಟೋಬರ್​ 31ರವರೆಗೂ ಲಾಕ್​ಡೌನ್​ ವಿಸ್ತರಣೆ'

Tamil Nadu 30 Oct
Published on

ಕರೊನಾ ಲಾಕ್​ಡೌನ್​ ನಿರ್ಬಂಧವನ್ನು ಬಹುತೇಕ ಸಡಿಲಗೊಳಿಸಿರುವ ಕೇಂದ್ರ ಸರ್ಕಾರ ಇಂದು ಅನ್​ಲಾಕ್​-5ರ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.

ಆದರೆ ಕೆಲವು ರಾಜ್ಯಗಳು ಮಾತ್ರ ಅನ್​ಲಾಕ್​ಗಳನ್ನೆಲ್ಲ ಬದಿಗೊತ್ತಿ ಲಾಕ್​ಡೌನ್​​ ಮುಂದುವರಿಸುವತ್ತಲೇ ಚಿಂತನೆ ನಡೆಸುತ್ತಿವೆ. ಕೇರಳ ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತೊಮ್ಮೆ ಲಾಕ್​ಡೌನ್​ ಹೇರುವ ಎಚ್ಚರಿಕೆಯನ್ನು ಈಗಾಗಲೇ ನೀಡಿದ್ದಾರೆ. ಆದರೆ ತಮಿಳುನಾಡು ಸರ್ಕಾರ ನಿನ್ನೆಯೇ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಅಕ್ಟೋಬರ್​ 31ರವರೆಗೂ ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರಿಯಲಿದೆ ಎಂದು ಆದೇಶ ನೀಡಿದೆ. ಇದನ್ನೂ ಓದಿ: ನಾಳೆಯಿಂದ ದೇಶದಲ್ಲಿ ಅನ್​ಲಾಕ್​-5: ಹೀಗಿದೆ ನೋಡಿ ಕೇಂದ್ರದ ಹೊಸ ಮಾರ್ಗಸೂಚಿ

ಶಾಲಾ ಮಕ್ಕಳ ಹಿತದೃಷ್ಟಿಯಿಂದ ಲಾಕ್​ಡೌನ್​ ವಿಸ್ತರಣೆ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ, ಸ್ವಲ್ಪ ಮಟ್ಟಿಗೆ ನಿರ್ಬಂಧಗಳನ್ನು ಸಡಿಲಿಸಿ, ಲಾಕ್​ಡೌನ್​ ವಿಸ್ತರಣೆ ಮಾಡಿದ್ದಾರೆ.

ಕಂಟೇನ್​ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ ಇರಲಿದೆ. ಸೆಕ್ಷನ್​ 144 ಕೂಡ ಮುಂದುವರಿಯಲಿದೆ. ಅದನ್ನು ಹೊರತುಪಡಿಸಿದ ಏರಿಯಾಗಳಲ್ಲಿ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಿಕೆ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಡೌಟೇ ಬೇಡ ಅಕ್ಟೋಬರ್ 4ಕ್ಕೇ ನಡೆಯುತ್ತೆ ಸಿವಿಲ್ ಸರ್ವೀಸ್ ಪ್ರಿಲಿಮ್ಸ್ ಎಕ್ಸಾಂ

ಶಿಕ್ಷಣ ಸಂಸ್ಥೆಗಳು, ಪಾರ್ಕ್​, ಮನರಂಜನಾ ಸ್ಥಳಗಳು, ಮ್ಯೂಸಿಯಂಗಳು ತೆರೆಯಲು ಅವಕಾಶ ಇಲ್ಲ. ಹಾಗೇ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸಮಾರಂಭಗಳ ನೆಪದಲ್ಲಿ ಗುಂಪುಗೂಡುವಂತಿಲ್ಲ ಎಂದೂ ತಿಳಿಸಿದ್ದಾರೆ.

ಹಾಗೇ ಸಿನಿಮಾ ಶೂಟಿಂಗ್​ ಮುಂದುವರಿಸಬಹುದು. ಆದರೆ 100 ಜನರು ಮಾತ್ರ ಸ್ಥಳದಲ್ಲಿ ಇರಬೇಕು. ಸಣ್ಣಪುಟ್ಟ ಹೋಟೆಲ್​ಗಳು, ರೆಸ್ಟೋರೆಂಟ್​ಗಳು ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು ಎಂದೂ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net