ನಾಲ್ಕು ಜಿಲ್ಲೆಗಳು ಸಂಪೂರ್ಣ ಲಾಕ್​ಡೌನ್​: ತಮಿಳುನಾಡು ಸಿಎಂ ಘೋಷಣೆ

tamilnadu
Published on

ಚೆನ್ನೈ: ಲಾಕ್​ಡೌನ್​ ಸಡಿಲಿಕೆಯಿಂದ ಕರೊನಾವೈರಸ್​ ಸೋಂಕು ಹೆಚ್ಚುತ್ತಿರುವುದನ್ನು ಮನಗಂಡಿರುವ ತಮಿಳುನಾಡು ಸರ್ಕಾರ ವೈರಸ್ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.

ಚೆನ್ನೈ, ತಿರುವಳ್ಳೂರು, ಕಾಂಚಿಪುರಂ, ಚೆಂಗಲ್‌ಪಟ್ಟು‌ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಜೂನ್ 19ರಿಂದ 30ರ ತನಕ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಆಗಿರುತ್ತದೆ. 4 ಜಿಲ್ಲೆಗಳಲ್ಲಿ ವೈದ್ಯಕೀಯ ಸೇವೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದಿದ್ದಾರೆ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ.

ಅಗತ್ಯ ಸೇವೆಗಳನ್ನು ಮಾರಾಟ ಮಾಡುವ ಅಂಗಡಿಗಳು ಮಾತ್ರ ಬಾಗಿಲು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ದಿನಸಿ ಅಂಗಡಿ, ತರಕಾರಿ ಅಂಗಡಿ, ಪೆಟ್ರೋಲ್ ಬಂಕ್ ಮುಂತಾದ ಅಂಗಡಿಗಳು 6 ರಿಂದ 2 ಗಂಟೆ ತನಕ ಮಾತ್ರ ತೆರೆಯಬಹುದಾಗಿದೆ. ಖಾಸಗಿ ಕಾರು ಮತ್ತು ಬೈಕ್‌ನಲ್ಲಿ ಜನರು 2 ಕಿ. ಮೀ. ತನಕ ಮಾತ್ರ ಸಂಚಾರ ನಡೆಸಬಹುದಾಗಿದೆ.

ಮುಖ್ಯಮಂತ್ರಿ ಮತ್ತು ಆರೋಗ್ಯ ತಜ್ಞರನ್ನು ಒಳಗೊಂಡ ಸಭೆಯ ನಂತರ ಈ ಪ್ರಕಟಣೆ ಹೊರಬಂದಿದೆ. ಪೊಲೀಸರು ತಂಡಗಳನ್ನು ರಚನೆ ಮಾಡಿಕೊಂಡು ಲಾಕ್​ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲಿದ್ದಾರೆ.

ತಮಿಳುನಾಡಿನಲ್ಲಿ ಪ್ರಸ್ತುತ ಕರೊನಾ ಸೋಂಕಿತರ ಸಂಖ್ಯೆ 44,661ರಷ್ಟಿದ್ದು. 24,547 ಮಂದಿ ಚೇತರಿಸಿಕೊಂಡಿದ್ದಾರೆ. 435 ಮಂದಿ ಮೃತಪಟ್ಟಿದ್ದಾರೆ. ಚೆನ್ನೈ ನಗರ ಒಂದರಲ್ಲಿಯೇ 31,896 ಪ್ರಕರಣಗಳು ಪತ್ತೆಯಾಗಿವೆ. ಕಳೆದ ವಾರದಿಂದ ಸೋಂಕಿತರ ಸಂಖ್ಯೆ ವಿಪರೀತ ಏರಿಕೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net