

ಬೆಂಗಳೂರು: ರಾಜ್ಯದಲ್ಲಿನ ಬ್ಯಾಟರಿ ಆಧಾರಿತ ಆಟೋರಿಕ್ಷಾಗಳಿಗೆ ತಮಿಳುನಾಡು ಹಾಗೂ ದೆಹಲಿ ಸರ್ಕಾರಗಳ ಮಾದರಿಯಲ್ಲಿ ಕೂಡಲೇ ಉಚಿತ ಪರವಾನಗಿಗಳನ್ನು ನೀಡಿ, ನಿಯಮಾವಳಿಗಳನ್ನು ಅಳವಡಿಸಿದ್ದಲ್ಲಿ ಅನವಶ್ಯಕವಾಗಿ ಆಟೋ ಮೀಟರ್ ಬೆಲೆಗಳನ್ನು ಏರಿಸಿ ಗ್ರಾಹಕರಿಗೆ ಅನಾವಶ್ಯಕವಾಗಿ ಹೊರೆ ಮಾಡುವ ಅವಶ್ಯಕತೆಯೇ ಇರುವುದಿಲ್ಲವೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿನ ಹಲವು ನಗರಗಳಲ್ಲಿ ಮೀಟರ್ ಆಧಾರದಲ್ಲಿ ಓಡಾಡುತ್ತಿರುವ ಬ್ಯಾಟರಿ ಚಾಲಿತ ಆಟೋರಿಕ್ಷಾ ಗಳು ರಾಜ್ಯದ ಸಾರಿಗೆ ಇಲಾಖೆಯ ಯಾವುದೇ ಕಾನೂನು ಕಟ್ಟಳೆಗಳಿಗೆ ಒಳಪಡದೆ ಇರುವ ಕಾರಣದಿಂದಾಗಿ ಮೆಥನಲ್ ಮತ್ತು ಇಥೆನಾಲ್ ಇಂಧನ ಬಳಸಿ ಸಂಚರಿಸುತ್ತಿರುವ ಪಾರಂಪರಿಕ ಆಟೋರಿಕ್ಷಾಗಳ ಚಾಲಕರುಗಳ ಆದಾಯದಲ್ಲಿ ವ್ಯತ್ಯಯ ಉಂಟಾಗಿ ಆರ್ಥಿಕವಾಗಿ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಯಾವುದೇ ಸಾರಿಗೆ ನಿಯಮಾವಳಿಗಳ ಅಂಕುಶವಿಲ್ಲದ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳು ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ರಸ್ತೆಗಳಿದಿರುವ ಪರಿಣಾಮ ಇಂದು ಸರ್ಕಾರದ ಸಾರಿಗೆ ನಿಯಮಾವಳಿಗಳ ಪ್ರಕಾರ ಪರವಾನಗಿ ತೆಗೆದುಕೊಂಡು ಪ್ರಾಮಾಣಿಕವಾಗಿ ತೆರಿಗೆ ಕಟ್ಟಿಕೊಂಡು ಬರುತ್ತಿರುವ ಲಕ್ಷಾಂತರ ಬಡ ಆಟೋರಿಕ್ಷಾ ಚಾಲಕರುಗಳು ತಮ್ಮ ಸಂಸಾರವನ್ನು ನಿರ್ವಹಿಸಲೂ ಸಾಧ್ಯವಾಗದೆ ಸಂಕಷ್ಟ ಪರಿಸ್ಥಿತಿಗೆ ಧೂಡಲ್ಪಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಹಾಗೂ ದೆಹಲಿ ರಾಜ್ಯಗಳಲ್ಲಿ ಬ್ಯಾಟರಿ ಆಧಾರಿತ ಆಟೋರಿಕ್ಷಾ ಗಳಿಗೆ ಸೂಕ್ತ ನಿಯಮಾವಳಿಗಳನ್ನು ರೂಪಿಸಿ 2 ವರ್ಗಗಳ ಆಟೋರಿಕ್ಷ ಚಾಲಕರಗಳು ಸುಭಿಕ್ಷವಾಗಿ ಜೀವನವನ್ನು ನಡೆಸಿಕೊಂಡು ಹೋಗುವ ವಾತಾವರಣವನ್ನು ಕಲ್ಪಿಸಿ ಕೊಟ್ಟಿದ್ದಾರೆ. ರಾಜ್ಯದಲ್ಲಿಯೂ ಕೂಡಲೇ ಇದೇ ರೀತಿಯ ನಿಯಮಾವಳಿಗಳನ್ನು ಅಳವಡಿಸುವ ಮೂಲಕ ಲಕ್ಷಾಂತರ ಆಟೋ ಚಾಲಕರುಗಳು ಆರ್ಥಿಕ ಸಂಕಷ್ಟದಿಂದ ಹೊರಬರುವಂತಹ ವಾತಾವರಣ ಕಲ್ಪಿಸಿ ಕೊಡಬೇಕೆಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.ಈ ಬಗ್ಗೆ ಪಕ್ಷದ ಆಟೋ ಘಟಕದ ರಾಜ್ಯಾಧ್ಯಕ್ಷ ಅಯುಬ್ ಖಾನ್ ಇನ್ನಿತರ ಆಟೋ ಸಂಘಟನೆಗಳ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.