ಇದು ಜಾಲತಾಣಗಳ ಯುಗ. ಸೋಶಿಯಲ್ ಮೀಡಿಯಾ ಬಳಸದ ಜನರೇ ವಿರಳ. ಇನ್ನು ಸೆಲಿಬ್ರಿಟಿಗಳಿಗಂತೂ ಜಾಲತಾಣಗಳು ಬೇಕೆ ಬೇಕು. ಸಿನಿಮಾ ಪ್ರಚಾರ, ಮಾಹಿತಿ ಹಾಗೂ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲು ತಾರೆಯರು ಜಾಲತಾಣ ಬಳಸುತ್ತಾರೆ. ಇದರಿಂದ ಕೆಲವರಿಗೆ ಉಪಯೋಗವಾದರೆ, ಇನ್ನು ಕೆಲವರಿಗೆ ಕಿರಿಕಿರಿ. ಹೀಗಾಗಿಯೇ ಕೆಲವರು ಸೋಷಿಯಲ್ ಮೀಡಿಯಾದಿಂದ ದೂರವಿದ್ದುಬಿಡುತ್ತಾರೆ. ಅಂಥವರಲ್ಲಿ ತಮಿಳು ನಟಿ ಐಶ್ವರ್ಯಾ ಲಕ್ಷ್ಮೀ ಕೂಡ ಒಬ್ಬರು. ಸೋಶಿಯಲ್ ಮೀಡಿಯಾಗಳಲ್ಲಿ ನಿರಂತರ ತೇಜೋವಧೆ ಮಾಡುವ ಕಾರಣ ನಟಿಯು ತಮ್ಮೆಲ್ಲಾ ಅಕೌಂಟ್‌ಗಳನ್ನು ನಿಷ್ಕ್ರಿಯಗೊಳಿಸಿದ್ದು, ಕೆಲ ವರ್ಷಗಳಿಂದ ಜಾಲತಾಣಗಳಿಂದ ದೂರ ಇದ್ದಾರಂತೆ. ಮತ್ತೆ ವಾಪಸ್ಸಾಗುತ್ತೀರಾ? ಎಂದು ಕೇಳಿದರೆ, ‘100 ಕೋಟಿ ರೂ. ಕೊಟ್ರೂ ಅವುಗಳ ಸಹವಾಸ ಬೇಡ’ ಎನ್ನುತ್ತಾರೆ ಐಶ್ವರ್ಯಾ ಲಕ್ಷ್ಮೀ. ‘ಜಾಲತಾಣಗಳಿಂದಾಗಿ ನಾವು ಸುರಕ್ಷಿತವಾಗಿದ್ದೇವೆ ಅಂತ ಅನಿಸುವುದಿಲ್ಲ. ಅಲ್ಲಿ ನಮ್ಮ ದೇಹದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಚಿತ್ರಗಳನ್ನು ತಿರುಚುತ್ತಾರೆ. ಯಾರೋ ಮಾಡುವ ಒಂದು ಕಮೆಂಟ್ ಎಲ್ಲರನ್ನೂ ದ್ವೇಷಿಸುವಂತೆ ಮಾಡುತ್ತದೆ. ಅದಕ್ಕಾಗಿ ನಾನು ಅವುಗಳಿಂದ ದೂರವಿದ್ದೇನೆ. ಈಗ 100 ಕೋಟಿ ರೂ. ಕೊಟ್ರೂ ಅವುಗಳ ಸಹವಾಸ ಬೇಡ ಎನ್ನುವಂತಾಗಿದೆ. ಸಿನಿಮಾಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದೆನಿಸಿದರೆ, ನನ್ನ ನಾಯಿ ಹೆಸರಿನ ಮೇಲೆ ಒಂದು ಅಕೌಂಟ್ ತೆರೆಯುತ್ತೇನೆ’ ಎಂದಿರುವ ಐಶ್ವರ್ಯಾ, ‘ಇನ್ನು ಸೋಶಿಯಲ್ ಮೀಡಿಯಾಗಿಂತ ಜನಗಳನ್ನು ನೇರವಾಗಿ ಭೇಟಿ ಮಾಡಿ, ಮಾತನಾಡುವುದು ನನಗೆ ಖುಷಿ ನೀಡುತ್ತದೆ’ ಎಂದು ಹೇಳಿಕೊಂಡಿದ್ದಾರೆ. ಸದ್ಯ ಐಶ್ವರ್ಯಾ ನಟನೆಯ ‘ಗಟ್ಟಾ ಕುಸ್ತಿ 2’ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. -ಏಜೆನ್ಸೀಸ್