

Tamannaah: ಬಹುಭಾಷಾ ತಾರೆ, 'ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ನಟಿ ತಮನ್ನಾ ಭಾಟಿಯಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗಿಯಾಗಿ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡ ತಮನ್ನಾ, ತಮ್ಮ ಬ್ಯೂಟಿ ರಹಸ್ಯ ಕುರಿತು ಶಾಕಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಇದು ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಹಲವರ ಗೊಂದಲ ಮತ್ತು ವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ನಟಿ ಬಿಚ್ಚಿಟ್ಟ ವಿಚಾರ ಬಹಳ ಹಳೆಯದು ಎಂಬುದು ಇಲ್ಲಿ ಗಮನಾರ್ಹ.
ಮುಖದಲ್ಲಿನ ಮೊಡವೆಗಳನ್ನು ಮಯಾವಾಗಿಸಲು ನಟಿ ತನ್ನ ಎಂಜಲನ್ನು ಹಚ್ಚಿಕೊಳ್ಳುವ ಅಭ್ಯಾಸ ಹೊಂದಿರುವುದಾಗಿ ಇತ್ತೀಚಿನ ಸಂದರ್ಶನದಲ್ಲಿ ಮುಕ್ತವಾಗಿ ಹೇಳಿದ್ದಾರೆ. ಅಸಲಿಗೆ ಈ ವಿಚಾರವನ್ನು 2021ರಲ್ಲೇ ತಮನ್ನಾ ಬಹಿರಂಗಪಡಿಸಿದ್ದರು. ಆದರೆ, ಈಗ ಮತ್ತೊಮ್ಮೆ ಅದೇ ವಿಷಯವನ್ನು ಹಂಚಿಕೊಂಡಿರುವುದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.
ಮೊದಲು ಮೊಡವೆ ಸಮಸ್ಯೆ ಇತ್ತು. ಅದನ್ನು ಹೋಗಲಾಡಿಸಲು ಎಂಜಲೇ ಔಷಧ ಎಂದು ತಿಳಿಯಿತು. ಮೊದಮೊದಲು ಮುಜುಗರವಾಯಿತು. ನಂತರ ಬೆಳಗಿನ ಜಾವದ ಸಮಯದಲ್ಲಿ ಬರುವ ಎಂಜಲನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದೇನೆ. ಇದರಿಂದ ಮೊಡವೆಗಳು ಒಣಗಿ ಸೌಂದರ್ಯವೂ ವೃದ್ಧಿಸಿದೆ. ಜತೆಗೆ, ಯಾವುಕೇ ಕೃತಕ ರಾಸಾಯನಿಕಗಳಿಗೆ ಮೊರೆ ಹೋಗದೇ ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಕೂದಲ ಆರೈಕೆ ಮಾಡುವೆ ಎಂದಿದ್ದಾರೆ ತಮನ್ನಾ.
ನಟಿಯ ಈ ಮಾತನ್ನು ಕೇಳಿದ ಹಲವರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಹೇಗೆ ಒಬ್ಬ ಮನುಷ್ಯನ ಎಂಜಲು ಮೊಡವೆ ನಿವಾರಿಸಲು ಸಾಧ್ಯ? ಅಷ್ಟು ಸುಲಭವೇ ಮೊಡವೆ ಹೋಗಿಸುವುದು? ಇದರಿಂದ ಇಷ್ಟೆಲ್ಲ ಪ್ರಯೋಜನ ಇದ್ಯಾ? ನೀವು ಸುಳ್ಳು ಹೇಳುತ್ತಿಲ್ಲ ತಾನೆ ಎಂದೆಲ್ಲಾ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಅಷ್ಟಕ್ಕೂ ಈ ಬಗ್ಗೆ ವರದಿಗಳು ಮತ್ತು ವಿಜ್ಞಾನ ಏನು ಹೇಳುತ್ತೆ? ಎಂಬ ಮಾಹಿತಿ ಹೀಗಿದೆ ನೋಡಿ.
ಮನುಷ್ಯನ ಲಾಲಾರಸವು ಮೊಡವೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಲ್ಲ. ಇದರಿಂದ ಮೊಡವೆಗಳು ಮಾಯ ಎನ್ನುವುದು ದೂರದ ಮಾತು. ಬದಲಿಗೆ ಹೀಗೆ ಮಾಡುವುದರಿಂದ ಚರ್ಮದ ಸ್ಥಿತಿ ಇನ್ನಷ್ಟು ಹದಗೆಡಬಹುದು. ಎಂಜಲಿನಲ್ಲಿ ಕೆಲವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಅಂಶಗಳಿದ್ದರೂ, ಮೊಡವೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುವಷ್ಟು ಸಾಂದ್ರತೆ ಇರುವುದಿಲ್ಲ. ವಾಸ್ತವವಾಗಿ, ಉಗುಳು ಹಚ್ಚುವುದರಿಂದ ಚರ್ಮದ ಕಾಂತಿ ಹಾಳಾಗಬಹುದು ಮತ್ತು ಸಮಸ್ಯೆಗಳು ಉಲ್ಬಣಿಸುವ ಸಾಧ್ಯೆತಗಳು ಹೆಚ್ಚು.
ಒಂದಷ್ಟು ವರದಿಗಳ ಪ್ರಕಾರ, ಬೆಳಗ್ಗಿನ ಎಂಜಲು ಮುಖದಲ್ಲಿನ ಮೊಡವೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಕೆಲವರು ಇದನ್ನು ಹೌದು ಎಂದು ವಾದಿಸುತ್ತಾರೆ. ಇದಕ್ಕೆ ಪೂರಕವಾಗಿ ಮತ್ತೊಂದಷ್ಟು ವರದಿಗಳು, ಇದು ಸುಳ್ಳು. ಬ್ರಶ್ ಮಾಡುವ ಮುನ್ನ ಬಾಯಲ್ಲಿರುವ ಉಗುಳು ಮೊಡವೆಗಳನ್ನು ಮಾಯಗೊಳಿಸುವ ಸಂಗತಿ ಸತ್ಯದಿಂದ ದೂರ ಎಂದು ತಿಳಿಸಿವೆ,(ಏಜೆನ್ಸೀಸ್).