

ರಾಣೆಬೆನ್ನೂರ: ಪಾಲಕರು ತಮ್ಮ ಮಕ್ಕಳಿಗೆ ಕೇವಲ ಇಂಜಿನಿಯರ್, ಡಾಕ್ಟರ್ ಆಗಲಿ ಎಂಬ ಹಂಬಲ ಕೈಬಿಟ್ಟು ಅವರು ಆಸಕ್ತಿ ಹೊಂದಿದ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರೇರಣೆಯಾಗಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಆರ್‌ಟಿಇಎಸ್ ಕಾಲೇಜ್‌ನ ಸಭಾಭವನದಲ್ಲಿ ಶುಕ್ರವಾರ ಜಿಪಂ, ಸ್ಥಳೀಯ ಶಾಲಾ ಶಿಕ್ಷಣ ಇಲಾಖೆ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಭಾ ಕಾರಂಜಿ ಮಕ್ಕಳ ಕಲಾ ಪ್ರತಿಭೆಗೆ ಒಂದು ಉತ್ತಮ ಅವಕಾಶವಾಗಿದ್ದು ಅದನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಈಗಿನ ಶಿಕ್ಷಣ ಪದ್ಧತಿ ಕೇವಲ ವಿಷಯಗಳಿಗೆ ಸೀಮಿತವಾಗಿದ್ದು ಸ್ವಾವಲಂಬಿ ಜೀವನಕ್ಕೆ ಪೂರಕವಾಗಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಜತೆ ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕವಾಗಿದೆ. ಅದರ ವ್ಯವಸ್ಥೆ ಕಲ್ಪಿಸಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಮಾರಂಭದಲ್ಲಿ ನಗರದ ಮೌಂಟ್‌ವ್ಹೀವ್ ಸ್ಕೂಲ್‌ನ ಪ್ರಾಚಾರ್ಯ ಬಸವರಾಜ ಮಡಿವಾಳರ ಪ್ರದರ್ಶಿಸಿದ ಭರತನಾಟ್ಯ ಎಲ್ಲರ ಮನಸೂರೆಗೊಂಡಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಆರ್‌ಟಿಇಎಸ್ ಸಂಸ್ಥೆ ಕಾರ್ಯದರ್ಶಿ ಸೀತಾ ಕೋಟಿ, ಸರಿಗಮಪ ಖ್ಯಾತಿಯ ರುಬಿನಾ ಸಯ್ಯದ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಿಂಗರಾಜ ಸುತ್ತಕೋಟಿ, ಕ್ಷೇತ್ರ ಸಮನ್ವಯಾಧಿಕಾರಿ ಮಂಜು ನಾಯಕ, ನೋಡೆಲ್ ಅಧಿಕಾರಿ ಸುನಿತಾ, ರಮೇಶ ಚಲವಾದಿ, ಎಚ್.ಪಿ. ಬಣಕಾರ, ಹೇಮಂತ ಎಸ್.ಕೆ., ಆರ್.ವೈ. ಗೋಣೆಪ್ಪನವರ, ಆರ್.ಡಿ. ಹೊಂಬರಡಿ, ಡಾ. ಮಾರುತಿ ಲಮಾಣಿ, ರಮೇಶ ಯಳೆಹೊಳಿ, ಕಾಂತೇಶ ಮಾದಾಪುರ ಮತ್ತಿತರರು ಪಾಲ್ಗೊಂಡಿದ್ದರು.