ತಾಲೂಕಿನ ಪ್ರತಿ ಶಾಲೆಗೆ ಕಂಪ್ಯೂಟರ್ ವಿತರಣೆ; ಶಾಸಕ ಪ್ರಕಾಶ ಕೋಳಿವಾಡ ಭರವಸೆ

13-RNR-05
Published on

ರಾಣೆಬೆನ್ನೂರ: ಇಂದಿನ ದಿನಮಾನದಲ್ಲಿ ಕಂಪ್ಯೂಟರ್ ಜ್ಞಾನ ಬಹಳ ಅವಶ್ಯವಿದೆ. ಆದ್ದರಿಂದ ಮುಂದಿನ ದಿನದಲ್ಲಿ ತಾಲೂಕಿನ ಪ್ರತಿ ಶಾಲೆಗೂ ಎರಡು ಕಂಪ್ಯೂಟರ್ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಆರ್‌ಟಿಇಎಸ್ ಪದವಿ ಕಾಲೇಜ್‌ನ ಮೈದಾನದಲ್ಲಿ ಬುಧವಾರ ಜಿಪಂ, ತಾಪಂ, ಸ್ಥಳೀಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲೆ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ಕಲಿಸಿಕೊಡುವ ಕುರಿತು ಶಿಕ್ಷಣ ಸಚಿವರೊಂದಿಗೆ ಮಾತನಾಡಿದ್ದೇನೆ. ಅದು ಕಾರ್ಯರೂಪಕ್ಕೆ ಬರುವುದು ತಡವಾದಲ್ಲಿ ತಾಲೂಕಿನ ಪ್ರೌಢಶಾಲೆಗಳಲ್ಲಿ ಎರಡು ಕಂಪ್ಯೂಟರ್ ಕೊಡಿಸಿ ಶಿಕ್ಷಣದ ವ್ಯವಸ್ಥೆ ಮಾಡುತ್ತೇನೆ ಎಂದರು.
ಕ್ರೀಡೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ದೇಹ ಹಾಗೂ ಮನಸ್ಸು ಸದೃಢವಾಗಿರುತ್ತದೆ. ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಕ್ರೀಡಾಮನೋಭಾವನೆಯಿಂದ ಭಾಗವಹಿಸಬೇಕು. ಇಂದಿನ ದಿನಗಳಲ್ಲಿ ಕೌಶಲ ಜ್ಞಾನ ಬಹುಮುಖ್ಯವಾಗಿದ್ದು, ವಿದೇಶಗಳಲ್ಲಿ ಶಾಲಾ ತರಗತಿಗಳಲ್ಲಿಯೇ ಮಕ್ಕಳಿಗೆ ಕೌಶಲ ತರಬೇತಿ ಕಲಿಸುತ್ತಾರೆ. ಅದೇ ರೀತಿ ನಮ್ಮ ಮಕ್ಕಳಿಗೂ ಕೌಶಲ ಕಲಿಸಬೇಕಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸೇವಾ ನಿವೃತ್ತಿ ಹೊಂದಿದ ಹೊಸಹುಲಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಆನಂದ ಕುಮರಿ ಅವರನ್ನು ಸನ್ಮಾನಿಸಲಾಯಿತು.
ಎಪಿಎಂಸಿ ಮಾಜಿ ಸದಸ್ಯ ಪರಮೇಶಪ್ಪ ಗೂಳಣ್ಣನವರ, ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದ ಅಧ್ಯಕ್ಷ ಎಂ.ಡಿ. ದ್ಯಾಮಣ್ಣನವರ, ಪ್ರಮುಖರಾದ ಎಚ್.ಪಿ. ಬಣಕಾರ, ಲಿಂಗರಾಜ ಸುತ್ತಕೋಟಿ, ರಮೇಶ ಚಲವಾದಿ, ಡಾ. ಮಾಲತೇಶ ಚಲವಾದಿ, ಸಿ.ಎಜ್. ಮೇಗಳಮನಿ, ರಮೇಶ ಅಳಲಗೇರಿ, ಜಗದೀಶ ಹುಗ್ಗಿ, ಕಾಂತೇಶ ಮಾದಾಪುರ, ಎಚ್.ಎಸ್. ಹುಡೇದ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net