

ರಾಣೆಬೆನ್ನೂರ: ಸ್ಥಳೀಯ ಕ್ರೀಡಾಪಟುಗಳ ಪ್ರತಿಭೆ ಹೊರಹೊಮ್ಮಿಸಲು ಅನುಕೂಲವಾಗುವಂತೆ ತಾಲೂಕು ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡಬೇಕಾದ ಅಗತ್ಯವಿದೆ ಎಂದು ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಹೇಳಿದರು.
ನಗರದ ಆರ್‌ಟಿಇಎಸ್ ಪದವಿ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಕ್ರೀಡಾಪಟುಗಳು ವಿಶ್ವ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವಂತಹ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು. ಪೋಷಕರು ಕೂಡ ತಮ್ಮ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದರು.
ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಕ್ರೀಡಾಜ್ಯೋತಿಗೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ತಾಲೂಕಿನ 32 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಗರಸಭೆ ಸದಸ್ಯ ರಮೇಶ ಕರಡೇಣ್ಣನವರ, ಗಂಗಾಧರ ಬಣಕಾರ ಮತ್ತಿತರರು ಉಪಸ್ಥಿತರಿದ್ದರು.