

ರಾಣೆಬೆನ್ನೂರ: ದೇಶ ಸದೃಢವಾಗಬೇಕಾದರೆ ಯುವ ಜನಾಂಗ ಸದೃಢರಾಗಬೇಕು. ಅದಕ್ಕಾಗಿ ಕ್ರೀಡಾಕೂಟದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಕ್ರೀಡೆಗಳು ಸದೃಢ ಮನಸ್ಸು ಹಾಗೂ ದೇಹಕ್ಕೆ ಸಹಕಾರಿಯಾಗಿವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಆರ್‌ಟಿಇಎಸ್ ಕಾಲೇಜ್‌ನ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ 2023-24ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾಪಟುಗಳು ಸೋಲು, ಗೆಲುವಿಗೆ ತಲೆ ಕೆಡಿಸಿಕೊಳ್ಳದೆ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಬೇಕು. ಜಿಲ್ಲಾ, ವಿಭಾಗ, ರಾಜ್ಯ ಮಟ್ಟದವರೆಗೆ ಗೆಲುವು ಸಾಧಿಸಬೇಕು. ನಿರ್ಣಾಯಕರು ನಿಕ್ಷಪಾತದಿಂದ ತೀರ್ಪು ನೀಡಬೇಕು ಎಂದರು.
ಆರ್‌ಎನ್‌ಆರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಕ್ರೀಡಾಜ್ಯೋತಿ ಬೆಳೆಗಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ಅಧಿಕಾರಿ ಸುರೇಶ ಕರೂರ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಡಿ. ದ್ಯಾಮಣ್ಣನವರ, ಆನಂದ ಹುಲಬನ್ನಿ, ಜುಲ್ಫೀಕರ ಮೆಡ್ಲೇರಿ, ರಾಮು ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.