

ನವದೆಹಲಿ: ಬಂಧಿತ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಮತ್ತು ಇತರರನ್ನು ಬಿಡುಗಡೆ ಮಾಡಿ, ಗುಂಡಿನ ದಾಳಿ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸುವವರೆಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ತಿಳಿಸಿದೆ. ಲೇಹ್ನಲ್ಲಿ ಸೆ.24ರಂದು ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ನಾವು ಲೇಹ್ ಅಪೆಕ್ಸ್ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸೋನಮ್ ವಾಂಗ್ ಚುಕ್ ಈ ದೇಶದ ನಾಯಕ, ಅವರ ವಿರುದ್ಧದ ಕೇಂದ್ರ ಗೃಹ ಸಚಿವಾಲಯದ ಆರೋಪಗಳನ್ನು ಕೆಡಿಎ ನಿರಾಕರಿಸುತ್ತದೆ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಅವರೊಂದಿಗೆ ಬಂಧನಕ್ಕೊಳಗಾಗಿರುವ ಇತರರನ್ನೂ ಬಿಡುಗಡೆ ಮಾಡಬೇಕು. ಬಂಧಿತರ ಬಿಡುಗಡೆ ಮಾಡುವವರೆಗೆ ನಾವು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸುವುದಿಲ್ಲ. ಕೆಲವರು ಲಡಾಖಿಗಳನ್ನು ರಾಷ್ಟ್ರ ವಿರೋಧಿಗಳು ಎಂದು ಕರೆಯುತ್ತಿದ್ದಾರೆ, ನಮಗೆ ಯಾರಿಂದಲೂ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ, ನಾವು ದೇಶಕ್ಕಾಗಿ ನಮ್ಮ ಪ್ರಾಣ ತ್ಯಾಗ ಮಾಡಿದ್ದೇವೆ. ಲಡಾಖಿಗಳನ್ನು ರಾಷ್ಟ್ರ ವಿರೋಧಿಗಳು ಎಂದು ಬಿಂಬಿಸುವುದನ್ನು ನಿಲ್ಲಿಸಿ ಎಂದು ಕೆಡಿಎ ಸಹ-ಅಧ್ಯಕ್ಷ ಅಸ್ಗರ್ ಅಲಿ ಕರ್ಬಲೈ ತಿಳಿಸಿದ್ದಾರೆ.
ಪತ್ನಿ ಆರೋಪ: ಸೋನಮ್ನ್ನು ದೇಶ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ಬಂಧಿಸಲಾಗಿದ್ದು, ಅವರ ವಿರುದ್ಧ ಏಕಪಕ್ಷೀಯ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಸೋನಮ್ ಪತ್ನಿ ಮತ್ತು ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೆಟಿವ್ಸ್ ಲಡಾಖ್ (ಎಚ್ಐಎಎಲ್) ಸಹ ಸಂಸ್ಥಾಪಕಿ ಗೀತಾಂಜಲಿ ಆಂಗ್ಮೋ ಆರೋಪಿಸಿದ್ದಾರೆ.
ಕರ್ಫ್ಯೂ ಸಡಿಲಿಕೆ: ಲೇಹ್ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇರುವುದರಿಂದ ಮಂಗಳವಾರ ಬೆಳಗ್ಗೆ 10ರಿಂದ7 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು.
ಫ್ಯಾಕ್ಟ್ ಚೆಕ್: ಲಡಾಖ್ ಡಿಜಿಪಿ ಎನ್.ಡಿ. ಸಿಂಗ್ ಅವರ ಡಿಜಿಟಲ್ ಮಾರ್ಪಡಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ರಕ್ಷಣಾ ಸಚಿವರ ನಿರ್ದೇಶನದ ಮೇರೆಗೆ ಸೋನಮ್ನ್ನು ಬಂಧಿಸಿರುವುದಾಗಿ ಕೇಳಿ ಬರುತ್ತಿರುವ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಘಟಕ ತಿಳಿಸಿದೆ.