

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬೇಡಿಕೆಯನ್ನು ಜಾರಿ ಮಾಡಲು ಸಂವಿಧಾನದ ತಿದ್ದುಪಡಿ ಅಗತ್ಯವಿದೆ ಎಂಬ ಕುಂಟು ನೆಪವೊಡ್ಡಿ ಪರಿಶಿಷ್ಟ ಸಮುದಾಯಗಳ ಹಕ್ಕನ್ನು ನಿರಾಕರಣೆ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಇಂದಿನ ಮಾನ್ಯ ಸುಪ್ರೀಂ ಕೋರ್ಟ್ನ ತೀರ್ಪು ಛಡಿಯೇಟು ಕೊಟ್ಟಿದೆ. ಒಳ ಮೀಸಲಾತಿಯು ಕಾನೂನುಬದ್ಧ ಎಂದು ಎತ್ತಿ ಹಿಡಿದು ಸುಪ್ರೀಂಕೋರ್ಟ್‌ನ ಏಳು ಸದಸ್ಯರ ಸಾಂವಿಧಾನಿಕ ಪೀಠ ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಗೆಲುವಾಗಿದೆ. ಈ ಐತಿಹಾಸಿಕ ತೀರ್ಪಿನಿಂದ ದಶಕಗಳಿಂದ ನಡೆಯುತ್ತಿದ್ದ ನಿರಂತರ ಹೋರಾಟಕ್ಕೆ ಅಭೂತಪೂರ್ವ ಜಯ ದೊರಕಿದಂತಾಗಿದೆ ಎಂದು ಆರ್. ಅಶೋಕ್ ಸಿಎಂ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಳ ಮೀಸಲಾತಿಯ ವಿಷಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡು ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ ಎಸ್ಟಿ ಮೀಸಲಾತಿಯನ್ನು ಹೆಚ್ಚಿಸಿತ್ತು. ಹಾಗೆಯೇ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ ಮೀಸಲಾತಿಯನ್ನು ವರ್ಗೀಕರಣ ಮಾಡುವ ಶಿಫಾರಸ್ಸನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿತ್ತು. ಆನಂತರದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಳ ಮೀಸಲಾತಿಯ ಪರವಾಗಿ ಸುಪ್ರೀಂಕೋರ್ಟ್ನಲ್ಲಿ ಗಟ್ಟಿಯಾಗಿ ವಕಾಲತ್ತು ನೆಡಸುತ್ತಾ ಬಂದಿದ್ದು, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯಾಗಿದೆ ಎಂದರು.
ಸಿಎಂ ಇನ್ನಾದರೂ ಕುಂಟು ನೆಪ ಹೇಳುವುದು ಬಿಟ್ಟು ಹಿಂದಿನ ಬಿಜೆಪಿ ಜಾರಿಗೆ ತಂದಿದ್ದ ಒಳಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಪರಿಶಿಷ್ಟ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.