ಸರ್ಕಾರ ಪತನದ ಹುಯಿಲು, ಕಾಂಗ್ರೆಸ್‌ನಲ್ಲಿ ದಿಗಿಲು

Siddaramaiah H D Kumaraswamy
Published on

ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪತನದ ಮಾತುಗಳು ಚಾಲ್ತಿಗೆ ಬಂದಿವೆ.

ಲೋಕಸಭೆ ಚುನಾವಣೆಗೆ ಮುನ್ನ ಮತ್ತು ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಕೆಡವುವ ಮಾತುಗಳಿಗೆ ರೆಕ್ಕೆ ಪುಕ್ಕ ಬಂದಿತ್ತು. ಮಹಾರಾಷ್ಟ್ರ ಸಿಎಂ ಏಕನಾಥ್ ಸಿಂಧೆ ಕರ್ನಾಟಕದಲ್ಲಿ ಸರ್ಕಾರ ಪತನವಾಗಲಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು. ಅದನ್ನು ಬಿಜೆಪಿಯ ಅನೇಕ ನಾಯಕರು ಪುಷ್ಟೀಕರಿಸಿದ್ದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಂತೂ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಹೀನಾಯ ಸೋಲು ಕಂಡ ಬಳಿಕ ಸರ್ಕಾರ ಪತನದ ಬಗ್ಗೆ ಪದೇ ಪದೆ ಮಾತನಾಡುತ್ತಲೇ ಇದ್ದಾರೆ.

ಶನಿವಾರ ಬಿಜೆಪಿ ಸಂಸದರ ಸನ್ಮಾನ ಸಮಾರಂಭದಲ್ಲಿ ಭಿನ್ನಾಭಿಪ್ರಾಯವಿಲ್ಲದೇ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿದರೆ ಭವಿಷ್ಯದ ದಿನಗಳಲ್ಲಿ 2006ರ ಮಾದರಿಯಲ್ಲಿ ಸರ್ಕಾರ ರಚಿಸುವ ಸಾಧ್ಯತೆ ನಮ್ಮ ಮುಂದಿದೆ ಎಂದು ಹೇಳಿದ್ದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಕಾಂಗ್ರೆಸ್ ನಾಯಕರು ತಮ್ಮ ಸಂಖ್ಯಾಬಲವನ್ನು ಮುಂದಿಟ್ಟು ಎಷ್ಟೇ ಆತ್ಮವಿಶ್ವಾಸದ ಮಾತುಗಳನ್ನಾಡಿದರೂ ಒಳಗೊಳಗೆ ಅಳುಕಂತೂ ಇದ್ದೇ ಇದೆ.

ಕುಮಾರಸ್ವಾಮಿ ಮಾತನ್ನು ಬಂಬಲಿಸಿರುವ ಮತ್ತೊಬ್ಬ ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಸರ್ಕಾರ ಯಾವಾಗ ಪತನವಾಗಲಿದೆ ಎಂಬುದು ಕುಮಾರಸ್ವಾಮಿಗೆ ತಿಳಿದಿರಬಹುದು ಮಾರ್ಮಿಕ ಮಾತುಗಳನ್ನಾಡಿದ್ದಾರೆ.

ಬಿಜೆಪಿ ನಾಯಕರ ಇಂತಹ ಹೇಳಿಕೆಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ನಾಯಕರು ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡುತ್ತಲೇ ಬಂದಿದ್ದಾರೆ. ಆದರೆ, ಕುಮಾರಸ್ವಾಮಿ ಶನಿವಾರ ನೀಡಿರುವ ಹೇಳಿಕೆ ಸರ್ಕಾರದಲ್ಲಿ ಅಂಜಿಕೆ ಉಂಟು ಮಾಡಿದೆಯಲ್ಲದೆ, ಬಿಜೆಪಿ, ಜೆಡಿಎಸ್‌ನಲ್ಲಿ ಸಂಚಲನ ಮೂಡಿಸಿದೆ. ಮೈತ್ರಿ ಸರ್ಕಾರ ರಚನೆಯ ಹೊಸ ಆಶಾಭಾವ ಉಂಟು ಮಾಡಿದೆ.

ಇನ್ನು ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ನಮ್ಮ ಸರ್ಕಾರ ಸುಭದ್ರವಾಗಿದೆ. ಹಾಗೆ ನೋಡಿದರೆ ಕೇಂದ್ರ ಸರ್ಕಾರವೇ ಅಪಾಯದಲ್ಲಿದೆ. ಸರ್ಕಾರ ಬೀಳುತ್ತದೆ ಎನ್ನುವವರನ್ನು ಕಾಯುತ್ತ ಇರಲು ಹೇಳಿ, ಅವರೇನು ರಾಜ್ಯಕ್ಕೆ ಬರುವರೆ ಎಂದು ಟಾಂಗ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಪತನದ ಮಾತುಗಳು ಚರ್ಚಾವಸ್ತುವಾಗಿರುವುದು ರಾಜ್ಯ ರಾಜಕಾರಣವನ್ನು ಜೀವಂತವಾಗಿರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net