ತಾಲಿಬಾನ್ ಸರ್ಕಾರ ರಚನೆ ಮಾತುಕತೆ; 2-3 ದಿನಗಳಲ್ಲಿ ಸ್ಪಷ್ಟ ಚಿತ್ರಣ

Taliban 2
ತಾಲಿಬಾನಿಗಳ ಜಾಲಿರೈಡ್
Published on

ಕಾಬುಲ್: ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಮಂಗಳವಾರದ ವಿದ್ಯಮಾನಗಳೆಲ್ಲವೂ ತಾಲಿಬಾನ್ ನೇತೃತ್ವದ ಸರ್ಕಾರ ರಚನೆಗೆ ಸಂಬಂಧಿಸಿದ್ದಾಗಿತ್ತು. ತನ್ನ ಸದಸ್ಯರಷ್ಟೇ ಅಲ್ಲದೆ ಎಲ್ಲರನ್ನೂ ಸೇರಿಸಿಕೊಂಡು ಭವಿಷ್ಯದ ಸರ್ಕಾರ ರಚಿಸುವ ಇಂಗಿತ ವ್ಯಕ್ತವಾಗಿದೆ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ. ದೇಶದ ನೆಗೋಷಿಯೇಟಿಂಗ್ ಕೌನ್ಸಿಲ್ ಮುಖ್ಯಸ್ಥ ಅಬ್ದುಲ್ಹಾ ಅಬ್ದುಲ್ಹಾ ಮತ್ತು ಮಾಜಿ ಅಧ್ಯಕ್ಷ ಹಮೀದ್ ಕರ್ಜೆ ಸೇರಿದಂತೆ ಹಲವು ರಾಜಕೀಯ ನೇತಾರರ ಜತೆಗೆ ತಾಲಿಬಾನ್​ನ ಹಿರಿಯ ನಾಯಕ ಆಮಿರ್ ಖಾನ್ ಮುತ್ತಾಕಿ ಹಲವು ಸುತ್ತಿನ ಮಾತುಕತೆ ನಡೆಸಿರುವ ಮಾಹಿತಿಯೂ ಬಹಿರಂಗವಾಗಿದೆ. ಮುತ್ತಾಕಿ ಅವರು ಈ ಹಿಂದಿನ ತಾಲಿಬಾನ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು. ಸೋಮವಾರ ರಾತ್ರಿಯಿಂದ ಮತ್ತೊಂದು ಸುತ್ತಿನ ಮಾತುಕತೆ ಪ್ರಗತಿಯಲ್ಲಿದೆ. ಇದಕ್ಕೆ ಪೂರಕವಾಗಿ ಅಧ್ಯಕ್ಷ ಅಶ್ರಫ್ ಘನಿ ರಹಸ್ಯವಾಗಿ ಪಲಾಯನ ಮಾಡುವ ಒಂದು ವಾರ ಮೊದಲೇ ಇತರೆ ರಾಜಕೀಯ ನಾಯಕರ ಜತೆಗೆ ಆಮಿರ್ ಖಾನ್ ಮುತ್ತಾಕಿ ಸಂಪರ್ಕ ಸಾಧಿಸಿದ್ದರು. 20 ವರ್ಷಗಳ ನಂತರದ ತಾಲಿಬಾನ್ ಪ್ರಾಬಲ್ಯದ ಸರ್ಕಾರ ಮತ್ತೊಮ್ಮೆ ಆಡಳಿತ ಹಿಡಿಯಲು ಸಜ್ಜಾಗಿದೆ. ಈ ನಡುವೆ, ಸರ್ಕಾರದ ಸಂಘಟನಾತ್ಮಕ ರಚನೆ ಹೇಗಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅನುಭವದ ಆಧಾರದ ಮೇಲೆ ಎಲ್ಲವೂ ಇಸ್ಲಾಮಿಕ್ ನಾಯಕತ್ವದ ಪ್ರಕಾರವೇ ಇರಲಿದೆ. ಎಲ್ಲರನ್ನೂ ಒಳಗೊಂಡಂತೆ ಸರ್ಕಾರ ರಚನೆಯಾಗಲಿದೆ ಎಂದು ತಾಲಿಬಾನ್​ನ ಸಂಸ್ಕೃತಿ ಆಯೋಗದ ಸದಸ್ಯ ಎನಾಮುಲ್ಲಾ ಸಮನ್​ಗನಿ ಸ್ಪಷ್ಟವಾಗಿ ಹೇಳಿದ್ದಾರೆ.

ತಾಲಿಬಾನಿಗಳ ಜಾಯ್ ರೈಡ್: ಕಾಬುಲ್ ಪ್ರವೇಶಿಸಿರುವ ತಾಲಿಬಾನಿ ಹೋರಾಟಗಾರರು ಖಾಲಿಯಾಗಿರುವ ಪಟ್ಟಣದ ಗಲ್ಲಿಗಲ್ಲಿಗೆ ನುಗ್ಗಿ ಎಲ್ಲವನ್ನೂ ದೋಚುತ್ತಿದ್ದಾರಲ್ಲದೆ, ಮನಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಈ ಪೈಕಿ ತಾಲಿಬಾನಿಗಳು ಅಮ್ಯೂಸ್​ವೆುಂಟ್ ಪಾರ್ಕ್​ನಲ್ಲಿ ಮಕ್ಕಳ ಆಟದ ಕಾರುಗಳನ್ನೇರಿ ಜಾಯ್ ರೈಡ್ ಮಾಡುತ್ತಿರುವ ದೃಶ್ಯ ಗಮನಸೆಳೆದಿದೆ.

ಆಡಳಿತದಲ್ಲಿ ಮಹಿಳೆಯರು ತಾಲಿಬಾನ್ ಗ್ರೀನ್ ಸಿಗ್ನಲ್: ಅಫ್ಘನ್ ಅನ್ನು ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಗೊಂದಲವನ್ನು ಬಗೆಹರಿಸಲು ಮಂಗಳವಾರ ಸಾಮಾನ್ಯ ಸೂಚನೆಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಆಡಳಿತದಲ್ಲಿ ಮಹಿಳೆಯರು ಕೂಡ ಈ ಹಿಂದಿನಂತೆಯೇ ಮುಂದುವರಿಯಬೇಕು ಎಂಬ ಅಂಶ ಗಮನಸೆಳೆದಿದೆ.

ತಾಲಿಬಾನ್ ನಾಯಕ ಕತಾರ್​ಗೆ: ತಾಲಿಬಾನ್​ನ ಪ್ರಮುಖ ನಾಯಕ ಮುಲ್ಲಾಹ್ ಅಬ್ದುಲ್ ಘನಿ ಬರದಾರ್ ಅವರು ಮಂಗಳವಾರ ಅಫ್ಘನ್​ನಿಂದ ಕತಾರ್​ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿನ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್​ರಹಮಾನ್ ಅಲ್ ಥನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ತಾಲಿಬಾನ್, ಅಫ್ಘಾನಿಸ್ಥಾನದಲ್ಲಿನ ಇತ್ತೀಚಿನ ಭದ್ರತಾ ಮತ್ತು ರಾಜಕೀಯ ಬೆಳವಣಿಗೆ ವಿಚಾರ ಚರ್ಚೆಗೆ ಒಳಗಾಗಿದೆ ಎಂದು ಹೇಳಿದೆ.

ಅಫ್ಘನ್​ಗೆ ಹಂಗಾಮಿ ಅಧ್ಯಕ್ಷ: ಅಧ್ಯಕ್ಷ ಅಶ್ರಫ್ ಘನಿ ಪಲಾಯನಗೈದ ಕಾರಣ ಸ್ವಾಭಾವಿಕವಾಗಿಯೇ ಉಪಾಧ್ಯಕ್ಷನಾಗಿರುವ ತಾನು ಹಂಗಾಮಿ ಅಧ್ಯಕ್ಷನಾಗಿದ್ದೇನೆ ಎಂದು ಉಪಾಧ್ಯಕ್ಷ ಅಮ್ರುಲ್ಲಾ ಸಾಲ್ಹೇ ಮಂಗಳವಾರ ಘೋಷಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಾಲ್ಹೇ, ಸದ್ಯ ನಾನು ನನ್ನ ದೇಶವಾಗಿರುವ ಅಫ್ಘನ್​ನಲ್ಲೇ ಇದ್ದೇನೆ ಮತ್ತು ಸಂವಿಧಾನ ಪ್ರಕಾರ ಕಾನೂನು ಬದ್ಧ ಹಂಗಾಮಿ ಅಧ್ಯಕ್ಷನಾಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ತಾಲಿಬಾನ್ ಮೊದಲ ಸುದ್ದಿಗೋಷ್ಠಿ

ಅಫ್ಘನ್ ಅನ್ನು ವಶಕ್ಕೆ ತೆಗೆದುಕೊಂಡ ಬಳಿಕ ಕಾಬುಲ್​ನಲ್ಲಿ ತಾಲಿಬಾನ್ ಮೊದಲ ಸುದ್ದಿಗೋಷ್ಠಿಯನ್ನು ಮಂಗಳವಾರ ಸಂಜೆ ನಡೆಸಿದೆ. ತಾಲಿಬಾನ್ ವಕ್ತಾರ ಝುಬಿಹುಲ್ಲಾ ಮುಜಾಹಿದ್ ಈ ಸಂದರ್ಭದಲ್ಲಿ ಹೇಳಿದ್ದಿಷ್ಟು-

  • ಇಡೀ ದೇಶವನ್ನು ನಾವು ಅಭಿನಂದಿಸುತ್ತಿದ್ದೇವೆ. ಇಂದು ದೇಶದ ಮೇಲೆ ನಮಗೆ ಕಾನೂನುಬದ್ಧ ಅಧಿಕಾರ ಸಿಕ್ಕಿದೆ. ನಮಗೆ ಯಾವುದೇ ವಿಷಾದವಿಲ್ಲ. ಯಾವುದೆ ದೇಶದೊಂದಿಗೂ ನಾವು ಯುದ್ಧ ಮಾಡಲು ಬಯಸುವುದಿಲ್ಲ.
  • ಎಲ್ಲ ಮಾಧ್ಯಮ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ಎಂದಿನಂತೆಯೇ ನಡೆಸಿಕೊಂಡು ಹೋಗಬಹುದು. ಆದರೆ ಮೂರು ಷರತ್ತುಗಳನ್ನು ಪಾಲಿಸಬೇಕು . ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾದ ವಿಚಾರ ಪ್ರಸಾರ ಮಾಡಬಾರದು. ಸುದ್ದಿ, ಕಾರ್ಯಕ್ರಮಗಳ ಪ್ರಸಾರದ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸಬೇಕು. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ಯಾವುದೇ ಮಾಧ್ಯಮ ಸಂಸ್ಥೆಯೂ ಕಾರ್ಯಾಚರಿಸಬಾರದು.
  • ಎಲ್ಲರನ್ನೂ ನಾವು ಕ್ಷಮಿಸಿದ್ದೇವೆ. ಮಾಜಿ ಸೇನಾ ನಾಯಕರು ಮತ್ತು ವಿದೇಶಿ ಶಕ್ತಿಗಳೊಂದಿಗೆ ಸೇರಿ ಕೆಲಸ ಮಾಡಿದವರನ್ನೂ ಒಳಗೊಂಡು ಯಾರ ಮೇಲೂ ದ್ವೇಷ ಸಾಧಿಸುವುದಿಲ್ಲ.
  • ನಾವು ಶಾಂತಿಯುತವಾಗಿ ಬಾಳುವೆ ನಡೆಸಲು ಬಯಸುತ್ತಿದ್ದೇವೆ. ಎಮಿರೇಟ್ಸ್​ನ ಸೇನೆ ಕಾಬುಲ್ ಪ್ರವೇಶಿಸುವಾಗ ಕೆಲವು ದರೋಡೆಕೋರರು ಜತೆ ಸೇರಿದ್ದರು. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ದಿನಗಳೆದಂತೆ ಕಾನೂನು ಸುವ್ಯವಸ್ಥೆ ಸುಧಾರಿಸಲಿದೆ.
  • ಮಹಿಳೆಯರಿಗೆ ಷರಿಯಾ ಕಾನೂನು ಪ್ರಕಾರ ಸಿಗಬೇಕಾಗಿರುವ ಎಲ್ಲ ಹಕ್ಕಗಳೂ ಸಿಗಲಿದೆ. ಆರೋಗ್ಯ ಮತ್ತು ಇತರೆ ಕ್ಷೇತ್ರಗಳಲ್ಲಿ ಮಹಿಳೆಯರು ಅಗತ್ಯ ಇರುವಲ್ಲಿ ಕೆಲಸ ಮಾಡಬಹುದಾಗಿದೆ. ಮಹಿಳೆಯರ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುವುದಿಲ್ಲ.

ಅಮೆರಿಕಕ್ಕೆ 600ಕ್ಕೂ ಹೆಚ್ಚು ಅಫ್ಘನ್ನರು: ಅಮೆರಿಕ ವಾಯುಪಡೆಯ ಸಾರಿಗೆ ವಿಮಾನ ಸೋಮವಾರ ಕೊನೆಗಳಿಗೆಯಲ್ಲಿ 600ಕ್ಕೂ ಹೆಚ್ಚು ಅಫ್ಘನ್ನರನ್ನು ಅಮೆರಿಕಕ್ಕೆ ಕರೆದೊಯ್ದಿದೆ ಎಂಬುದನ್ನು ಬಿಂಬಿಸುವ ಫೋಟೋ ವೈರಲ್ ಆಗಿದೆ. ಅದರಲ್ಲಿ, ಮಹಿಳೆಯರು, ಮಕ್ಕಳು ಯಾವುದೇ ಲಗೇಜ್ ಇಲ್ಲದೇ ಓಡಿ ಹೋಗುತ್ತಿರುವ ಫೋಟೊಗಳೂ ಗಮನಸೆಳೆದಿವೆ.

ಅಫ್ಘನ್ ಯುದ್ಧಕ್ಕೆ 2 ಲಕ್ಷ ಕೋಟಿ ಡಾಲರ್!: ಅಫ್ಘಾನಿಸ್ಥಾನದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯ ಹೆಸರಿನಲ್ಲಿ 20 ವರ್ಷದಲ್ಲಿ ನಡೆಸಿದ ಯುದ್ಧಕ್ಕೆ ಅಮೆರಿಕ ಸರ್ಕಾರ 2 ಲಕ್ಷ ಕೋಟಿ ಡಾಲರ್ ವ್ಯಯಿಸಿದೆ. ಇದುವರೆಗೆ 2,448 ಯೋಧರನ್ನು ಮತ್ತು 4,000 ನಾಗರಿಕ ಉದ್ಯೋಗಿಗಳನ್ನು ಅಮೆರಿಕ ಕಳೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net