

ಶಿವಮೊಗ್ಗ: ಪ್ರತಿಭೆ ಯಾರೋಬ್ಬರ ಸ್ವತ್ತಲ್ಲ, ಅದು ಸಾಧಕರ ಸ್ವತ್ತು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹುಡುಕಿ ಹೊರತರುವ ಕೆಲಸ ಆಗಬೇಕು. ಶಿಕ್ಷಣ ಕೇವಲ ಗಳಿಕೆಗೆ ಸೀಮಿತವಾಗಬಾರದು ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶರಾವತಿನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಯುವ ಒಕ್ಕಲಿಗರ ವೇದಿಕೆ ಜಿಲ್ಲಾ ಘಟಕದಿಂದ ಬುಧವಾರ ಒಕ್ಕಲಿಗರ ಯುವ ಸಮಾವೇಶದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಅಂಗವಿಕಲರಿಗೆ ವೀಲ್‌ಚೇರ್, ವಾಕರ್, ವಾಕ್‌ಸ್ಟಿಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಎಂಬುದು ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕೋ ಮಾರಕವಾಗಬಾರದು ಎಂದರು.
ಕೆಲವರು ಇಂಜಿನಿಯರಿಂಗ್ ಮಾಡಿಕೊಂಡು ದೇಶ ಕಟ್ಟುವ ಬದಲು ವಿದ್ವಂಸಕಾರಿ ಕೃತ್ಯಗಳನ್ನು ಎಸೆಗಲು ಸಂಚು ರೂಪಿಸುತ್ತಿದ್ದಾರೆ. ಅಂತಹ ಯುವಕ(ಶಾರೀಕ್)ನೊಬ್ಬ ತೀರ್ಥಹಳ್ಳಿಯಲ್ಲಿ ಸಿಕ್ಕಿದ್ದಿದ್ದಾನೆ. ಇಂಜಿನಿಯರಿಂಗ್ ಓದಿದ್ದ ಆತ ಜನಸಂದಣಿ ಪ್ರದೇಶದಲ್ಲಿ ಬಾಂಬ್ ಇಟ್ಟು ಸ್ಪೋಟಿಸುವ ಸಂಚು ರೂಪಿಸಿದ್ದ. ಇದನ್ನು ನೋಡಿದರೆ ಇಂತಹ ವಿದ್ಯೆ ಬೇಕಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದರಿಂದ ನಮ್ಮ ವ್ಯವಸ್ಥೆ ದಿಕ್ಕು ತಪ್ಪುತ್ತಿದ್ದು ಯುವ ಪೀಳಿಗೆ ಪದವಿ ಪಡೆಯದಿದ್ದರೂ ಪರವಾಗಿಲ್ಲ ದಾರಿ ತಪ್ಪಬಾರದು ಎಂದು ಸಲಹೆ ನೀಡಿದರು.
ಒಕ್ಕಲಿಗರು ಹಿಂದು ಧರ್ಮ, ಸನಾತನ ಧರ್ಮದ ಒಂದು ಅಂಗವಾಗಿದೆ. ಸನಾತನ ಧರ್ಮ ನಿರ್ನಾಮ ಆಗಬೇಕೆಂದು ಕೆಲವರು ಹೇಳುತ್ತಿದ್ದಾರೆ. ಸನಾತನ ಧರ್ಮದಿಂದ ಸಹಿಷ್ಠತೆ ಬೆಳೆದಿದೆ. ಯಾವುದೇ ಒಬ್ಬ ವ್ಯಕ್ತಿ ಅಥವಾ ಜಾತಿಯಿಂದ ಸನಾತನ ಧರ್ಮ ಉದಯಿಸಿಲ್ಲ. ಆದರೆ ಸನಾತನ ಧರ್ಮದ ಬಗ್ಗೆ ಕೆಟ್ಟದಾಗಿ ಟೀಕೆ ಮಾಡುವವರಿಗೆ ಬುದ್ಧಿ ಕಲಿಸುವ ಕೆಲಸ ಆಗಬೇಕಿದೆ ಎಂದು ಕರೆ ನೀಡಿದರು.