

ಶೃಂಗೇರಿ: ನಾವು ಇಂತಹ ಜಾತಿಯಲ್ಲೇ ಹುಟ್ಟಬೇಕು ಎಂದು ನಾವು ಯಾರಿಗೂ ಅರ್ಜಿ ಹಾಕಿಲ್ಲ. ನಾವೆಲ್ಲರೂ ಮಾನವ ಜಾತಿಯಾಗಿದ್ದು, ಜ್ಞಾನಕ್ಕೆ ದಾಸರಾಗಿ ಪ್ರತಿಭಾವಂತರಾಗಬೇಕು ಎಂದು ಶಿಕ್ಷಣ ತಜ್ಞ ಕೆ.ಪಿ.ಪುತ್ತೂರಾಯ ಹೇಳಿದರು.
ವಿದ್ಯಾನಗರದ ಜೆಸಿಬಿಎಂ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿ ಸಂಘ ಮಂಗಳವಾರ ಏರ್ಪಡಿಸಿದ್ದ ಗುರುನಮನ ಮತ್ತು ಡಾ.ಕೆ.ಬಿ.ರಾಮಕೃಷ್ಣರಾವ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಹುಟ್ಟಿದ ಮೇಲೆ ಜಾತಿಗೆ ಅಂಟಿಕೊಂಡು ಮನುಷತ್ವ ಕಳೆದುಕೊಳ್ಳುತ್ತಿದ್ದೆವೆ. ಪ್ರತಿಭೆಗೆ ಯಾವುದೇ ಜಾತಿ,ಲಿಂಗ, ಮತವಿಲ್ಲ ಎಂದರು.
ಪ್ರತಿಭಾವಂತರಿಗೆ ಸಮಾಜದಲ್ಲಿ ಉಜ್ವಲ ಅವಕಾಶವಿದೆ. ನಾವು ಜ್ಞಾನಕ್ಕೆ ಸದಾ ಹಂಬಲಿಸಬೇಕು. ನಾವು ಗುರುವಿನಿಂದ ಕೇಳಬೇಕು, ಆಲಿಸಬೇಕು ಅದನ್ನು ಮನನ ಮಾಡಿಕೊಳ್ಳಬೇಕು. ನಾವು ಸಂಪಾದಿಸಿ, ಅನುಭವಿಸಬೇಕು. ಪಿತ್ರಾರ್ಜಿತ ಆಸ್ತಿ ನಂಬಿಕೊಂಡು ಮೋಜು, ಮಸ್ತಿ ಮಾಡಬೇಡಿ. ಸ್ವಂತ ಸಂಪಾದನೆ ಮಾಡಿ ಅದನ್ನು ಖರ್ಚು ಮಾಡಿ. ಯಾರೋ ಮಾಡಿದ ಆಸ್ತಿಯನ್ನು ನೀರಿನಂತೆ ಖರ್ಚು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಗೋಲ್ಡ್‌ಮೆಡಲ್ ಪಡೆಯಲು ಸಾಧ್ಯವಾಗದಿದ್ದರೂ ಚಿನ್ನದ ವ್ಯಕ್ತಿಯಾಗಿ ಬದುಕಿ ಇತರರಿಗೆ ಆದರ್ಶ ಪ್ರಾಯರಾಗಿರಿ. ಪ್ರಾಮಾಣಿಕತೆ ಇದ್ದಲ್ಲಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಸೂಪರ್‌ವೈಸರ್ ಇಲ್ಲದೇ ಪರೀಕ್ಷೆ ಬರೆಯುಂತಹ ಮನಃಸ್ಥಿತಿ ಬೆಳಸಿಕೊಳ್ಳಬೇಕು. ದುಡಿಮೆ ಇಲ್ಲದ ಹಣಕ್ಕೆ ಎಂದೂ ಆಸೆ ಪಡಬಾರದು. ಸ್ಪಷ್ಟವಾದ ಬದುಕಿನ ದಾರಿಗೆ ಗುರುವಿನ ಮಾರ್ಗದರ್ಶನ ಅಗತ್ಯ ಎಂದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ.ಸಂದೇಶ್ ಹೆಗ್ಡೆ ಮಾತನಾಡಿ, ಸಂಘದಿಂದ 43 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ದಾನಿಗಳ ಸಹಕಾರ ಪಡೆದು ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಕಾಲೇಜಿನ ಅಧ್ಯಾಪಕರನ್ನು ಗೌರವಿಸಲಾಯಿತು. ಸುರೇಶ್, ಬಿ.ಎಸ್.ಕಲ್ಪನಾ, ಪ್ರಾಚಾರ್ಯ ಡಾ.ಎಂ.ಸ್ವಾಮಿ, ಪಿಯು ಸಂಚಾಲಕ ಎ.ಜಿ.ಪ್ರಶಾಂತ್, ಡಾ.ಎಚ್.ಟಿ.ನಿರ್ಮಲಾ, ಭಾಗ್ಯಾ ಟ್ಯಾಗೂರ್, ಹೊನ್ನವಳ್ಳಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.