ಸಂಘ ಆದಾಯಕ್ಕೆ ಸೀಮಿತವಾಗದಿರಲಿ

ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಉಪಾಧ್ಯಾಯರ ಸಹಕಾರ ಸಂಘದ ವಾರ್ಷಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಿಇಒ ಆರ್.ಕೃಷ್ಣಪ್ಪ ಉದ್ಘಾಟಿಸಿದರು. ತುಳಸಿ ರಾಮನಾಯಕ, ಸಿ.ಜೆ.ಅರುಣ್ ಕುಮಾರ್ ಮತ್ತಿತರರು ಹಾಜರಿದ್ದರು.
ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಉಪಾಧ್ಯಾಯರ ಸಹಕಾರ ಸಂಘದ ವಾರ್ಷಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಿಇಒ ಆರ್.ಕೃಷ್ಣಪ್ಪ ಉದ್ಘಾಟಿಸಿದರು. ತುಳಸಿ ರಾಮನಾಯಕ, ಸಿ.ಜೆ.ಅರುಣ್ ಕುಮಾರ್ ಮತ್ತಿತರರು ಹಾಜರಿದ್ದರು.
Published on

ಮೈಸೂರು: ಒತ್ತಡದ ನಡುವೆಯೂ ಸಹಕಾರ ಸಂಘ ಸ್ಥಾಪಿಸುವ ಮೂಲಕ ಕಷ್ಟದಲ್ಲಿರುವವರಿಗೆ ಸಾಲ ನೀಡುವ ಜತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಧನ ನೀಡುತ್ತಿರುವುದು ಮೆಚ್ಚುವ ಕೆಲಸ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಉಪಾಧ್ಯಾಯರ ಸಹಕಾರ ಸಂಘದ 7ನೇ ವರ್ಷದ ವಾರ್ಷಿಕ ಸಭೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತರಾದ ಸಂಘದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕಾರಕ್ಕಾಗಿ ಹವಣಿಸುವ ಈ ಹೊತ್ತಿನಲ್ಲಿ ಒಂದು ಸಹಕಾರ ಸಂಘ ಸ್ಥಾಪಿಸುವ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಿಕ್ಷಕರು ಯಾವುದರಲ್ಲೂ ಕಮ್ಮಿ ಇಲ್ಲ ಎಂದು ಸಾಬೀತು ಮಾಡುತ್ತಿರುವುದು ಉತ್ತಮ ಕೆಲಸ ಎಂದರು.

ಸಂಘವನ್ನು ಆದಾಯಕ್ಕೋಸ್ಕರ ಸಮೀತ ಮಾಡಿಕೊಳ್ಳದೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವೃತ್ತಿ ಜಂಜಡದ ನಡುವೆಯೂ ಕುಟುಂಬದವರ ಜತೆ ಕಾಲ ಕಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಸಂಘದ ಅಧ್ಯಕ್ಷ ತುಳಸಿ ರಾಮನಾಯಕ ಮಾತನಾಡಿ, 230 ಷೇರುದಾರರಿಂದ 65 ಸಾವಿರ ರೂ. ಷೇರು ಹಣದಿಂದ ಸ್ಥಾಪಿತವಾದ ಸಂಘ ಇಂದು 93 ಲಕ್ಷ ರೂ.ನಷ್ಟು ವ್ಯವಹಾರ ನಡೆಸುತ್ತಿದೆ. ಜತೆಗೆ, 3 ಲಕ್ಷಕ್ಕೂ ಹೆಚ್ಚು ನಿವ್ವಳ ಲಾಭ ಗಳಿಸಿದೆ. ಇದಕ್ಕೆ ಸಹಕರಿಸಿದ ಆಡಳಿತ ಮಂಡಳಿ ಸದಸ್ಯರನ್ನು ಅಭಿನಂದಿಸುತ್ತೇನೆ ಎಂದರು.

ಪ್ರತಿವರ್ಷದಂತೆ ಈ ವರ್ಷವೂ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಆಡಳಿತ ಮಂಡಳಿ ಮತ್ತು ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಇವೆಲ್ಲ ಕಾರ್ಯಕ್ರಮಗಳನ್ನು ದಾನಿಗಳ ಸಹಕಾರದಿಂದ ಮಾಡಲಾಗಿದ್ದು, ಉಳಿದ ಹಣವನ್ನು ಆಡಳಿತ ಮಂಡಳಿಯ ಸದಸ್ಯರು ನೀಡಿದ್ದಾರೆ. ಆದ್ದರಿಂದ ಸಂಘದ ಹಣ ತೆಗೆಯದೆ ಕಾರ್ಯಕ್ರಮ ಮಾಡಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಗೌರವಿಸಲಾಯಿತು. ಅಲ್ಲದೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್, ಕ್ಷೇತ್ರ ಸಮನ್ವಯ ಅಧಿಕಾರಿ ವೆಂಕಟೇಶ್, ಅಕ್ಷರ ದಾಸೋಹ ಅಧಿಕಾರಿ ಪ್ರದೀಪ್ ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರೇಗೌಡ, ನಿಕಟ ಪೂರ್ವ ಅಧ್ಯಕ್ಷ ಮಂಜೇಗೌಡ, ಸಂಘದ ಉಪಾಧ್ಯಕ್ಷ ಬಿ.ಆರ್.ಕುಮಾರ್, ತಾಲೂಕು ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಪುರುಷೋತ್ತಮ್ ಮಾತನಾಡಿದರು. ಸಂಘ ನಿರ್ದೇಶಕರಾದ ಫಣಿರಾಜ್, ಡಿ.ಟಿ.ಕುಮಾರ್, ಕೆ.ಟಿ.ಸ್ವಾಮಿ, ಬಿ.ಕಾಂತರಾಜ್, ಟಿ.ಜೆ.ಸತೀಶ್ ಕುಮಾರ್, ಎಂ.ಮನು, ಬಿ.ಆರ್.ರುಕ್ಮಣಿ, ಡಿ.ರಾಧಾ, ಮುಖ್ಯ ಕಾರ್ಯನಿರ್ವಣಾಧಿಕಾರಿ ಎಂ.ವಿ.ರಮೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net