ಕೊನೆಗೂ ಸಿಕ್ತು ತಲಕಾವೇರಿ ಅರ್ಚಕರ ಶವ

Narayan Acharya
Published on

ತಲಕಾವೇರಿ: ಬ್ರಹ್ಮಗಿರಿ ಬೆಟ್ಟದ ಸಾಲಿನ ಗಜಗಿರಿ ಗುಡ್ಡ ಕುಸಿದು ಭೂಸಮಾಧಿಯಾದ ಆರು ದಿನಗಳ ಬಳಿಕ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಮೃತದೇಹ ಪತ್ತೆಯಾಗಿದೆ.

ಸತತ 3 ದಿನಗಳಿಂದ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್, ಅಗ್ನಿಶಾಮಕದಳ, ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಮೂರು ಹಿಟಾಚಿಗಳ ಮೂಲಕ ಮೂರನೇ ದಿನವಾದ ಮಂಗಳವಾರ ಭೂಸಮಾಧಿ ಆಗಿರುವ ನಾಲ್ವರ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.

ಮನೆಯಿಂದ 2 ಕಿ.ಮೀ. ದೂರದಲ್ಲಿರುವ ನಾಗತೀರ್ಥ ಎಂಬ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿದ್ದ ತಂಡಕ್ಕೆ ಮಣ್ಣಿನಡಿ ಸಿಲುಕಿದ್ದ ನಾರಾಯಣಾಚಾರ್ ಮೃತದೇಹ ಪತ್ತೆಯಾಯಿತು. ಬಳಿಕ ಅದನ್ನು ತಲಕಾವೇರಿಗೆ ತರಲಾಯಿತು. ನಾರಾಯಣಾಚಾರ್ ಸಹೋದರ ಆನಂದತೀರ್ಥ ಸ್ವಾಮೀಜಿ ಶವ ಮೊದಲ ದಿನವಾದ ಶನಿವಾರದ ಕಾರ್ಯಾಚರಣೆಯಲ್ಲೇ ಪತ್ತೆಯಾಗಿತ್ತು.

2 ಕಾರು ಪತ್ತೆ: ನಾರಾಯಣಾಚಾರ್ ಅವರ ಶವ ಪತ್ತೆಯಾಗುವ ಮುನ್ನ ಅವರ 2 ಕಾರುಗಳು ಪತ್ತೆಯಾದವು. ಮನೆಯ ಶೆಡ್​ನಲ್ಲಿ ನಿಲ್ಲಿಸಿದ್ದ ಡಸ್ಟರ್, ಒಮ್ನಿ ಕಾರು 60 ಅಡಿ ದೂರದಲ್ಲಿ ಪತ್ತೆಯಾದವು. ಎರಡು ಕಾರು ಕೂಡ ಗುರುತಿಸಲು ಸಾಧ್ಯವಾಗದಷ್ಟು ನುಜ್ಜುಗುಜ್ಜಾಗಿದ್ದವು. ಇದನ್ನೂ ಓದಿ: ಶಾಸಕ ಅಖಂಡ ಶ್ರೀನಿವಾಸ್​ ಮನೆ ಮೇಲೆ ಕಲ್ಲು ತೂರಾಟ, ಸ್ಥಳದಲ್ಲಿದ್ದ ವಾಹನಗಳಿಗೆ ಬೆಂಕಿ; ಉದ್ವಿಗ್ನ ಸ್ಥಿತಿ

ಕಾರ್ಯಾಚರಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮತ್ತಿತರರಿದ್ದರು.

ಸಚಿವ-ಸಂಸದರ ಮುತುವರ್ಜಿ

ಬೆಟ್ಟ ಕುಸಿದ ತಕ್ಷಣ ಬೆಂಗಳೂರಿನಿಂದ ಬಂದಿದ್ದ ಸಚಿವ ಸೋಮಣ್ಣ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಭೂಸಮಾಧಿ ಆದ ಐವರ ಪತ್ತೆಗಾಗಿ 6 ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರ ಜತೆ ಭಾಗಮಂಡಲದಲ್ಲಿದ್ದು ತಲ ಕಾವೇರಿಯಲ್ಲಿ ನಡೆಯುತ್ತಿದ್ದ ಶೋಧಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು.

ಅಂತ್ಯಕ್ರಿಯೆ: ನಾರಾಯಾಣಾಚಾರ್ ಅಂತ್ಯಕ್ರಿಯೆ ಮಂಗಳವಾರ ರಾತ್ರಿ ಬಟ್ಟಿಕಾಡು ಎಸ್ಟೇಟ್​ನಲ್ಲಿ ವಿಧ್ಯುಕ್ತವಾಗಿ ಪುತ್ರಿಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಅವರ ಸಹೋದರ ಆನಂದತೀರ್ಥ ಸ್ವಾಮೀಜಿ ಅವಿವಾಹಿತರಾಗಿದ್ದರಿಂದ ಅವರ ಶವವನ್ನು ಹೂಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net