

ಶಿವಮೊಗ್ಗ: ಒಕ್ಕಲಿಗ ಸಮಾಜವನ್ನು ಶಾಸಕ ಮುನಿರತ್ನ ಅವಹೇಳನ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಒಕ್ಕಲಿಗರ ಯುವ ವೇದಿಕೆಯಿಂದ ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಒಕ್ಕಲಿಗ ಹಾಗೂ ದಲಿತ ಹೆಣ್ಣುಮಕ್ಕಳ ಬಗ್ಗೆ ಮುನಿರತ್ನ ಅಶ್ಲೀಲವಾಗಿ ಮಾತನಾಡಿದ್ದಾರೆ. ಹೀಗಾಗಿ ಅವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಅತ್ಯಾಚಾರ ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿದೆ. ಗುತ್ತಿಗೆದಾರರನ್ನು ಶೋಷಣೆ ಮಾಡುತ್ತಿದ್ದ ಆರೋಪಗಳಿವೆ ಎಂದು ಪ್ರತಿಭಟನಾಕಾರರು ದೂರಿದರು.
ಮುನಿರತ್ನ ಹೇಳಿಕೆಯಿಂದ ಒಕ್ಕಲಿಗ ಸಮಾಜಕ್ಕೆ ನೋವುಂಟಾಗಿದೆ. ಅವರನ್ನು ಗೆಲ್ಲಿಸಿದ ಕ್ಷೇತ್ರದ ಜನರು ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಚೇತನ್ ಗೌಡ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೆಗ್ಡೆ, ಪ್ರಮುಖರಾದ ರಘುಗೌಡ, ಮೋಹನ್, ಹರ್ಷಿತ್, ಸತೀಶ್, ವಿಜಯ್, ಯಮುನಾ ರಂಗೇಗೌಡ, ಎಸ್.ಟಿ. ಚಂದ್ರಶೇಖರ್, ತಮ್ಮಯ್ಯ, ಬಸವರಾಜ್, ದಿವಾಕರ್, ಕಿರಣ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.