ರಸ್ತೆ ಅಪಘಾತ ತಡೆಗೆ ಸುರಕ್ಷತಾ ಕ್ರಮವಹಿಸಿ

klr rta meeting
ಕೋಲಾರ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷಾ ಮಾತನಾಡಿದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​, ಕೆಜಿಎಫ್​ ಪೊಲೀಸ್​ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್​ ಇದ್ದರು.
Published on

ಕೋಲಾರ: ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಬ್ಲಾಕ್​ ಸ್ಪಾಟ್​ಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಅನುರಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಇತ್ತೀಚಿಗೆ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ವರದಿಯಾಗುತ್ತಿವೆ, ಸಾವು&ನೋವುಗಳನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದರು.

ಅಪಘಾತ ಸ್ಥಳಗಳನ್ನು ಗುರಿತಿಸಲು ಪ್ರಾದೇಶಿಕ ಸಾರಿಗೆ, ಪೊಲೀಸ್​ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಸಿದ್ಧಪಡಿಸಿದ ವರದಿಯಲ್ಲಿ, ಸೂಚನಾ ಫಲಕಗಳನ್ನು ಅಳವಡಿಸುವುದು, ಸ್ಪೀಡ್​ ಬ್ರೇಕರ್​ಗಳನ್ನು ಅಳವಡಿಸುವುದು, ಜಂಗಲ್​ ಕಟಿಂಗ್​ ಮಾಡಿಸುವುದು, ಝಿಬ್ರಾ ಕ್ರಾಸಿಂಗ್​, ರಸ್ತೆಯನ್ನು ನೇರವಾಗಿ ಸರಿಪಡಿಸುವುದು, ರಸ್ತೆ ವಿಸ್ತರಣೆಗೆ ಕ್ರಮವಹಿಸಲು ತಿಳಿಸಲಾಗಿದೆ. ಅದರಂತೆ ಪರಿಹಾರ ಕಾರ್ಯಕ್ಕಾಗಿ ಶ್ರೀ ಅಂದಾಜು ವೆಚ್ಚ ಸಿದ್ಧಪಡಿಸಲ ಇಂಜಿನಿಯರ್​ ರಾಮಮೂರ್ತಿಗೆ ಸೂಚಿಸಿದರು.

ರಸ್ತೆ ಸುರಕ್ಷತಾ ನಿಯಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರ್ನಿಲಕ್ಷ್ಯ ವಹಿಸಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿಯಲ್ಲಿ ಸಾರಿಗೆ ಇಲಾಖೆ, ಪೊಲೀಸ್​ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.

ಎಲ್ಲ ಪ್ರಮುಖ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡುವ ಪ್ರದರ್ಶನ ಫಲಕಗಳನ್ನು ಹಾಗೂ ಅಗತ್ಯವಿರುವ ಕಡೆ ಸೂಚನಾ ಫಲಕ, ಅಳವಡಿಸಬೇಕು. ನಿರಂತರ ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಅನಗತ್ಯ ರಸ್ತೆ ಉಬ್ಬುಗಳನ್ನು ತೆಗೆಯುವುದು, ಅಪಾಯಕಾರಿಯಾಗಿರುವ ಹಾಗೂ ಹೆಚ್ಚು ಅಪಘಾತಗಳು ನಡೆದಿರುವ ಸ್ಥಳಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿ ಅವರು, ಡೆನೇಜ್​ಗಳ ಅಳವಡಿಕೆ ಹಾಗೂ ರಸ್ತೆ ಸುರಕ್ಷತಾ ಕ್ರಮಗಳಿಗೆ ಅಗತ್ಯವಿರುವ ಅನುದಾನದ ಬಗ್ಗೆ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.

ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಮನೆಗೆ ಕಳುಹಿಸುವ ಜವಾಬ್ದಾರಿ ಶಾಲೆಗಳ ಆಡಳಿತ ಮಂಡಳಿಯದ್ದಾಗಿದೆ. ಇದಕ್ಕೆ ಅಗತ್ಯ ಬಸ್​, ಕ್ಯಾಬ್​ಗಳನ್ನು ನಿಯೋಜಿಸಬೇಕು. ಹಾಗೂ ಖಾಸಗಿ ವಾಹನಗಳಲ್ಲಿ ಬರುವ ಮಕ್ಕಳಿಗೆ, ಪಾಲಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ಕರೆದು ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಶಾಲಾ ವಾಹನಗಳ ಮೇಲೆ ನಿಗಾವಹಿಸಿ

ಯಾವುದೇ ಶಾಲಾ ಮಕ್ಕಳು ಗೂಡ್ಸ್​ ವಾಹನದಲ್ಲಿ ಬಾರದಂತೆ ಗಮನ ವಹಿಸಬೇಕು. ಜಿಲ್ಲೆಯಲ್ಲಿ ಗಾರ್ಮೆಂಟ್ಸ್​ ಹಾಗೂ ಇತರ ಕಾರ್ಖಾನೆಗಳಿಗೆ ಬರುವ ಕಾರ್ಮಿಕರಿಗೆ ಸೂಕ್ತ ಸುರಕ್ಷತೆ ಸಾರಿಗೆ ವ್ಯವಸ್ಥೆಗಳ ಮಾಡಬೇಕು. ಈ ಬಗ್ಗೆ ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಕೈಗಾರಿಕಾ ಇಲಾಖೆಗಳು ಜಂಟಿಯಾಗಿ ಕಾರ್ಖಾನೆ ಮುಖ್ಯಸ್ಥರು ಹಾಗೂ ಕಾರ್ಮಿಕ ಮುಖ್ಯಸ್ಥರ ಸಭೆ ನಡೆಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉಪವಿಭಾಗಾಧಿಕಾರಿ ಡಾ.ಮೈತ್ರಿ, ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್​ ರಾಮಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net