ರಾಜ್ಯಪಾಲರೆದುರು ಬಹುಮತ ಸಾಬೀತು ಪಡಿಸಿ; ಗೆಹ್ಲೋಟ್​ಗೆ ಸವಾಲು ಹಾಕಿದ ಸಚಿನ್​ ಪೈಲಟ್​ ಬಣ

pilot_gehlot
Published on

ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಮೇಲಾಟ ಮುಂದುವರಿದಿದೆ ಹಾಗೂ ರೆಸಾರ್ಟ್​ ರಾಜಕೀಯ ಶುರುವಾಗಿದೆ. ಸಿಎಂ ಅಶೋಕ್​ ಗೆಹ್ಲೋಟ್​ ತನ್ನ ಬೆಂಬಲಿಗ ಶಾಸಕರೊಂದಿಗೆ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದಾರೆ.

ಈ ನಡುವೆ, ಕಾಂಗ್ರೆಸ್​ ಆಯೋಜಿಸಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ಶಾಸಕರು ಅಶೋಕ್​ ಗೆಹ್ಲೋಟ್​ ನೇತೃತ್ವಕ್ಕೆ ಬೆಂಬಲ ಸೂಚಿಸಿದ್ದಾರೆ. ಇವರೆಲ್ಲರೂ ಸಿಎಂ ಜತೆಗೆ ನಾವಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಸಂಖ್ಯಾಬಲ ಲೆಕ್ಕಾಚಾರ ಶುರುವಾಗುತ್ತಿದ್ದಂತೆ, ಬಂಡಾಯ ನಾಯಕ ಸಚಿನ್​ ಪೈಲಟ್​ ಬಣ ನೇರವಾಗಿ ಸಿಎಂ ಅಶೋಕ್​ ಗೆಹ್ಲೋಟ್​ಗೆ ಸವಾಲು ಹಾಕಿದೆ. ಒಂದು ವೇಳೆ ನಿಮ್ಮ ಬಳಿ ಬಹುಮತ ಸಾಬೀತುಪಡಿಸುವಷ್ಟು ರಾಜ್ಯಪಾಲರ ಬಳಿ ಹೋಗಿ ಅವರ ಎದುರಿನಲ್ಲಿ ಬಹುಮತ ಪ್ರದರ್ಶಿಸಿ ಎಂದು ಸಚಿನ್​ ಪೈಲಟ್​ ಪರ ಶಾಸಕರು ಹೇಳಿದ್ದಾರೆ.

ಪ್ರಜಾಪ್ರಭುತ್ವದ ನಿರ್ಣಯವನ್ನೇ ಧಿಕ್ಕರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಇದು 8 ಕೋಟಿ ರಾಜಸ್ಥಾನೀಯರಿಗೆ ಮಾಡುತ್ತಿರುವ ಅವಮಾನ ಎಂದು ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ 20 ಶಾಸಕರು ಹಾಜರಾಗಿರಲಿಲ್ಲ ಎಂದು ಹೇಳಲಾಗಿದೆ.

ಈ ನಡುವೆ, ಸಚಿನ್​ ಪೈಲಟ್​ಗೆ ಬೆಂಬಲ ಸೂಚಿಸಿ ದೆಹಲಿ ಹೊರವಲಯದ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದ ಕೆಲ ಶಾಸಕರು ಜೈಪುರಕ್ಕೆ ಮರಳಿದ್ದಾರೆ. ಇದು ಪೈಲಟ್​ಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಹೀಗಿದ್ದರೂ ಅಶೋಕ್​ ಗೆಹ್ಲೋಟ್​ ಬಣಕ್ಕೆ ಬಹುಮತ ಸಾಬೀತುಪಡಿಸುವಷ್ಟು ಸಂಖ್ಯಾಬಲವಿಲ್ಲ ಎಂದೇ ಪೈಲಟ್​ ಬೆಂಬಲಿಗರು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net