ಸ್ಯಾನಿಟೈಸರ್​ ಬಳಸಿದ ಬಳಿಕ ಬೆಂಕಿಯೊಂದಿಗೆ ಸರಸ ಆಡಿದರೆ ಅಪಾಯ ನಿಶ್ಚಿತ

sanitizer
Published on

ರೇವಾರಿ: ಸ್ಯಾನಿಟೈಸರ್​ ಬಳಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಆಲ್ಕೋಹಾಲ್​ ಆಧಾರಿತವಾಗಿರುವ ಉತ್ಪನ್ನವಾಗಿರುವ ಅದು ಬಟ್ಟೆ ಮೇಲೆ ಚೆಲ್ಲಿದರೆ, ಬೆಂಕಿ ಹೊತ್ತಿಕೊಂಡು ಗಾಯಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಹರಿಯಾಣದ ರೇವಾರಿಯ ನಿವಾಸಿಯೊಬ್ಬರು ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಿಸಿರುವ ಕಾರಣ ಮನೆಯಲ್ಲೇ ಉಳಿದಿದ್ದರು. ಅಡುಗೆಮನೆಯಲ್ಲಿ ಪತ್ನಿಗೆ ಸಹಾಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೈ ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್​ ಬಳಸಿದ್ದರು. ಆಕಸ್ಮಿಕವಾಗಿ ಸ್ಯಾನಿಟೈಸರ್​ ಅವರು ಧರಿಸಿದ್ದ ಕುರ್ತಾದ ಮೇಲೆ ಬಿದ್ದಿತ್ತು. ಅದನ್ನು ಸ್ವಚ್ಛಗೊಳಿಸಿಕೊಳ್ಳದೆ, ಗ್ಯಾಸ್​ ಒಲೆ ಮುಂದೆ ಏನೋ ಮಾಡಲು ಮುಂದಾಗಿದ್ದರು. ಆಗ ಅವರ ಕುರ್ತಾಕ್ಕೆ ಬೆಂಕಿ ಹೊತ್ತಿಕೊಂಡಿತು.

ತಕ್ಷಣವೇ ಬೆಂಕಿಯನ್ನು ನಂದಿಸಲಾಯಿತಾದರೂ, ಅಷ್ಟರಲ್ಲೇ ಅವರ ಮುಖ, ಕತ್ತು, ಹೊಟ್ಟೆ, ಸೊಂಟ, ಎದೆ ಮತ್ತು ಎರಡು ಮುಂಗೈಗಳು ಸೇರಿ ಶೇ.35 ಸುಟ್ಟಗಾಯಗಳಾಗಿದ್ದವು. ಸದ್ಯ ಅವರನ್ನು ದೆಹಲಿಯ ಸರ್​ ಗಂಗಾರಾಮ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರಿಗೆ ಚಿಕಿತ್ಸೆ ನೀಡುತ್ತಿರುವ ಸರ್​ ಗಂಗಾರಾಮ್​ ಆಸ್ಪತ್ರೆಯ ಪ್ಲಾಸ್ಟಿಕ್​ ಮತ್ತು ಕಾಸ್ಮೆಟಿಕ್​ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಮಹೇಶ್​ ಮಂಗಲ್​ ಅವರು, ಸ್ಯಾನಿಟೈಸರ್​ಗಳನ್ನು ಬಳಸುವಾಗಿ ತುಂಬಾ ಎಚ್ಚರಿಕೆ ವಹಿಸಬೇಕು. ಬಹುತೇಕ ಸ್ಯಾನಿಟೈಸರ್​ಗಳು ಶೇ.62 ಈಥೈಲ್​ ಆಲ್ಕೋಹಾಲ್​ನಿಂದ ಮಾಡಲ್ಪಟ್ಟಿರುತ್ತವೆ. ಈಥೈಲ್​ ಆಲ್ಕೋಹಾಲ್​ ತುಂಬಾ ಬೇಗನೆ ಬೆಂಕಿ ಹೊತ್ತಿಕೊಳ್ಳುವ ಗುಣ ಹೊಂದಿರುತ್ತದೆ. ಹಾಗಾಗಿ ಅವನ್ನು ಬಳಸಿ ಬೆಂಕಿಯ ಆಸುಪಾಸಿನಲ್ಲಿ ಓಡಾಡಿದರೂ ಬೆಂಕಿ ಹೊತ್ತಿಕೊಳ್ಳುವ ಅಪಾಯವಿರುತ್ತದೆ. ಅಗತ್ಯ ಪ್ರಮಾಣದಲ್ಲಿ ಬಳಸಿದ ಬಳಿಕ ಅದು ಒಣಗಿರುವುದನ್ನು ಖಾತ್ರಿ ಪಡಿಸಿಕೊಂಡು ಅಡುಗೆ ಮಾಡಲು ಮುಂದಾಗಬೇಕು. ಇಲ್ಲವಾದರೆ ಅಪಾಯ ಖಚಿತ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net