

ನವದೆಹಲಿ: ಕೇವಲ ಏಳೇ ಏಳು ದಿವಗಳ ಅವಧಿಯಲ್ಲಿ ಕರೊನಾ ಸೋಂಕುಪೀಡಿತ ವ್ಯಕ್ತಿಯ ಆರೋಗ್ಯವನ್ನು ಸುಧಾರಿಸುವುದು ಸಾಧ್ಯವಿದೆ. ಸೋಂಕು ಹರಡಿ ಪ್ರಾಣಕ್ಕೆ ಕುತ್ತು ಬರುತ್ತದೆ ಎಂದು ಪ್ಯಾನಿಕ್ ಆಗಬೇಕಾದ ಅವಶ್ಯಕತೆ ಇಲ್ಲ. ಆದಾಗ್ಯೂ, ಕರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವನ್ನು ಅನುಸರಿಸುವುದು ಅತೀಅವಶ್ಯ ಎಂದು ಯೋಗ ಗುರು ಬಾಬಾ ರಾಮದೇವ್ ಪ್ರತಿಪಾದಿಸಿದ್ದಾರೆ.
ಇಂಡಿಯಾ ಟಿವಿಯ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಬಾ ರಾಮದೇವ್, ಡೆಡ್ಲಿ ಕರೊನಾ ವೈರಸ್ ಹರಡದಂತೆ ತಡೆಯಲು ನಮ್ಮ ಬಳಿ ಯೋಗ ಮತ್ತು ಆಯುರ್ವೇದದಲ್ಲಿ ಔಷಧವಿದೆ. ದೇಶಾದ್ಯಂತ ಇರುವ ಯೋಗಶಾಲೆಗಳಲ್ಲಿ COVID19 ರೋಗಿಗಳಿಗೆ ಚಿಕಿತ್ಸೆಯನ್ನೂ ನೀಡುತ್ತಿದ್ದೇವೆ. ಹೀಗೆ ಚಿಕಿತ್ಸೆ ಪಡೆದು ಗುಣಮುಖರಾದವರು ಕೆಲವರಿದ್ದಾರೆ ಎಂದೂ ಅವರು ಹೇಳಿದರು.
ಕೇವಲ ಒಂದೇ ವಾರದಲ್ಲಿ ಈ ರೀತಿ ಗುಣಮುಖರಾದ ಗ್ವಾಲಿಯರ್ನ ಅಭಿಷೇಕ್ ಅವರನ್ನು ನೀವು ಗಮನಿಸಬಹುದು. ಅವರಿಗೆ COVID19 ಪಾಸಿಟಿವ್ ಬಂದಿತ್ತು. ಅವರು ಯೋಗ ಮತ್ತು ಆಯುರ್ವೇದ ಚಿಕಿತ್ಸೆಗೆ ಒಳಗಾಗಿದ್ದು, ಕೇವಲ ಒಂದೇ ವಾರದಲ್ಲಿ ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿದಾಗ COVID19 ಟೆಸ್ಟ್ ನೆಗೆಟಿವ್ ತೋರಿಸಿದೆ. ಆದಾಗ್ಯೂ, ಕರೊನಾ ವೈರಸ್ ಹರಡುವುದನ್ನು ತಡೆಯಲು ಎಲ್ಲರೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯ ಎಂದು ಬಾಬಾ ರಾಮದೇವ್ ಪ್ರತಿಪಾದಿಸಿದ್ದಾರೆ.
ಭಾರತದ ಪುರಾತನ ವೈದ್ಯಪದ್ಧತಿಗಳ ಪೈಕಿ ಆಯುರ್ವೇದ ಪ್ರಮುಖವಾದುದು. ಇದರಲ್ಲಿ ಸಸ್ಯ ಔಷಧ, ವ್ಯಾಯಾಮ, ಪಥ್ಯದ ಮಾರ್ಗಸೂಚಿಗಳು ಇರುತ್ತವೆ. ಇದನ್ನು ದೇಶದಲ್ಲಿ ಲಕ್ಷಾಂತರ ಜನ ಅನುಸರಿಸುತ್ತಿದ್ದಾರೆ ಎಂದು ಹೇಳಿದ ಬಾಬಾ ರಾಮದೇವ್ ಇದೇ ವೇಳೆ, ಕರೋನಾ ವಿರುದ್ಧದ ಸಮರದಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ 25 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು. (ಏಜೆನ್ಸೀಸ್)