

ಬೆಟ್ಟದಪುರ: ಬ್ಯಾಂಕಿನಿಂದ ಲಭಿಸುವ ಸಾಲ, ವಿಮೆ ಸೇರಿದಂತೆ ಇತರ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆಯ ವ್ಯವಸ್ಥಾಪಕ ಬಿ.ಕೆ.ರಮೇಶ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಶ್ರೀ ಕೊಳ್ಳಿಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳೆ ಸಾಲವನ್ನು ವರ್ಷದಲ್ಲಿ ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಶೇ.3ರಷ್ಟು ಬಡ್ಡಿ ಕಡಿಮೆಯಾಗಲಿದೆ. ಅಲ್ಲದೆ 436 ರೂ. ಮತ್ತು 20 ರೂ. ಪಾವತಿಸಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಎಂಬ ಕಡಿಮೆ ಮೊತ್ತದ ವಿಮೆಗೆ ನೋಂದಣಿ ಮಾಡಿಸಿಕೊಳ್ಳವ ಮೂಲಕ ನಾಲ್ಕು ಲಕ್ಷ ರೂ.ಮೊತ್ತದ ವಿಮೆ ಸೌಲಭ್ಯ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಬ್ಯಾಂಕಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಮ್ಮ, ಕೆನರಾ ಬ್ಯಾಂಕ್ ಬೆಟ್ಟದಪುರ ಶಾಖೆಯ ವ್ಯವಸ್ಥಾಪಕ ಗೌತಮ್, ಸಹಾಯಕ ವ್ಯವಸ್ಥಾಪಕ ಭರತ್, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಭಿಲಾಷ್ ಪನಲ ಹಾಗೂ ಸಿಬ್ಬಂದಿ ಯಶವಂತ್, ಬಿಲ್ ಕಲೆಕ್ಟರ್ ರಮಣಯ್ಯ ಸೇರಿದಂತೆ ಗ್ರಾಮಸ್ಥರು ಇದ್ದರು.