

ಹುಣಸೂರು: ದುಶ್ಚಟಗಳಿಗೆ ಒಳಗಾಗಿ ಬದುಕಿನ ಎಲ್ಲ ಸಂತಸಗಳನ್ನೂ ಕಳೆದುಕೊಳ್ಳಬೇಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಂ ನೆಲ್ಲಿತಾಯ ಸಲಹೆ ನೀಡಿದರು.
ತಾಲೂಕಿನ ಬಿಳಿಕೆರೆಯ ಶ್ರೀ ನಂಜುಂಡೇಶ್ವರ ಸಭಾ ಭವನದಲ್ಲಿ ಯೋಜನೆ ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ಶುಕ್ರವಾರ ಆಯೋಜಿಸಿದ್ದ 1877ನೇ ಮದ್ಯ ವರ್ಜನ ಶಿಬಿರದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಉತ್ತಮ ಮನಸ್ಸು, ಉತ್ತಮ ಆಲೋಚನೆ, ಉತ್ತಮ ದೃಷ್ಟಿಕೋನ ಇದ್ದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬಹುದು. ದುಶ್ಚಟಕ್ಕೆ ಒಳಗಾಗಿ ಬದುಕಿನಲ್ಲಿ ಎಲ್ಲವನ್ನು ಕಳೆದುಕೊಳ್ಳಬೇಕು. ದುಶ್ಚಟಕ್ಕೆ ಯಾವುದೆ ಮದ್ದಿಲ್ಲ. ಮನ ಪರಿವರ್ತನೆಯಿಂದ ನಮಗೆ ಅಂಟಿರುವ ಕೆಟ್ಟ ಚಟವನ್ನು ನಾವು ಬಿಡಬಹುದು. ನಿಮ್ಮ ಕೆಟ್ಟ ಹವ್ಯಾಸವನ್ನು ಇಡೀ ಸಮುದಾಯ ನೋಡುತ್ತದೆ. ನಿಮ್ಮ ಕುಟುಂಬ ಬೀದಿಪಾಲಾಗುವುದು ನಿಮಗೆ ಸರಿ ಎನಿಸುತ್ತದೆಯೇ ಎಂದು ಪ್ರಶ್ನಿಸಿದ ಅವರು, ಈ ಶಿಬಿರ ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಒಂದು ಒಳ್ಳೆಯ ಅವಕಾಶವಾಗಿದೆ. ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಪ್ರಾದೇಶಿಕ ಕಚೇರಿಯ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಮಾಧವ್ ನಾಯಕ್, ತಾಲೂಕು ಯೋಜನಾಧಿಕಾರಿ ಬಿ.ಧನಂಜಯ, ವಲಯ ಮೇಲ್ವಿಚಾರಕಿ ವೀಣಾ, ನವಜೀವನ ತಾಲೂಕು ಅಧ್ಯಕ್ಷ ಕೃಷ್ಣೇಗೌಡ, ಬಿಳಿಕೆರೆ ವಲಯ ನವಜೀವನ ಪದಾಧಿಕಾರಿ ಚಂದ್ರು, ಕುಮಾರ್, ಶಿಬಿರಾಧಿಕಾರಿ ವಿದ್ಯಾಧರ, ರಮೇಶ್, ಆರೋಗ್ಯ ಸಹಾಯಕಿ ಜಯಲಕ್ಷ್ಮೀ, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.