

ಬೆಟ್ಟದಪುರ: ಬೆಟ್ಟದಪುರದ ಐಟಿಐ ಕಾಲೇಜಿನಲ್ಲಿ ಮಂಗಳವಾರ ವಿಶ್ವಕರ್ಮ ಜಯಂತಿ ಆಚರಣೆ ಹಾಗೂ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಕೆ.ನಾರಾಯಣಮೂರ್ತಿ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರವು ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಆಗುವ ಹಿನ್ನೆಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಕುಶಲಕರ್ಮಿಗಳನ್ನು ಆರ್ಥಿಕವಾಗಿ ಸ್ವಾಲಂಬಿಗಳಾಗಿಸುವ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆ ನಿರ್ಮಾಣವಾಗಿದೆ. ಈ ಯೋಜನೆ ವ್ಯಾಪ್ತಿಗೆ ಒಳಪಡುವಂತೆ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬಹುದು. ಇದಲ್ಲದೆ ಈ ಯೋಜನೆಯಡಿ ಬ್ಯಾಂಕುಗಳ ಮುಖಾಂತರ ಒಂದರಿಂದ ಮೂರು ಲಕ್ಷ ರೂ.ವರೆಗೆ ಸಾಲಸೌಲಭ್ಯ ಕೂಡ ಲಭ್ಯವಿದೆ ಎಂದರು.
ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಅನುಜ್‌ಕುಮಾರ್, ಪಿರಿಯಾಪಟ್ಟಣ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕೆ.ಶ್ರೀಧರ್, ಸಂಸ್ಥೆಯ ಸಿಬ್ಬಂದಿ ಸುನೀಲ್, ಮಲ್ಲೇಶ್, ನಂದೀಶ್ ಹಾಗೂ ವಿದ್ಯಾರ್ಥಿಗಳು ಇದ್ದರು.