

ಆಲೂರು: ಅಂಗವಿಕಲರು ಮುಖ್ಯವಾಹಿನಿಗೆ ಬರಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. ಅಂಗವಿಕಲರ ಕೆಲಸ ಕಾರ್ಯಗಳಿಗಾಗಿ ಅನುಕೂಲವಾಗಲಿವೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಕೇಂದ್ರ ಸರ್ಕಾರದ ಅಲಿಂಕೋ ಸಂಸ್ಥೆ ವತಿಯಿಂದ ಅಂಗವಿಕಲ ಫಲಾನುಭವಿಗಳಿಗೆ ಬೈಸಿಕಲ್, ವೀಲ್ ಚೇರ್, ಬ್ಯಾಟರಿ ಚಾರ್ಜ್ ವೀಲ್ ಚೇರ್, ವಾಕರ್‌ಗಳನ್ನು ವಿತರಿಸಿ ಮಾತನಾಡಿದರು.
ಅಂಗವಿಕಲರು ಎಂದರೆ ಅಸಮರ್ಥರು ಎನ್ನುವ ತಪ್ಪು ಭ್ರಮೆ ಬೇಡ. ಅವರಲ್ಲಿಯೂ ವಿಶೇಷ ಸಾಮರ್ಥ್ಯ ಇರುತ್ತದೆ. ನಿರಂತರ ಶ್ರಮ ವಹಿಸುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕು. ಅಂಗವಿಕಲರು ಸಾಮಾನ್ಯರಂತೆ ಜೀವನ ನಡೆಸಲು ಕಷ್ಟಕರವಾಗುತ್ತಿದೆಯಾದರೂ ಅವರಿಗೆ ಸ್ವಲ್ಪ ಅನುಕೂಲವಾಗಲು, ನಿಮ್ಮ ಕೆಲಸಗಳನ್ನು ನಿರ್ವಹಿಸಲು ದ್ವಿಚಕ್ರ ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರವು ಅಂಗವಿಕಲರ ಕಲ್ಯಾಣಕ್ಕಾಗಿ ಸದಾ ಬದ್ಧವಿದೆ ಎಂದು ತಿಳಿಸಿದರು.
ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಅನುಪಮಾ, ತಾಲೂಕು ವಿವಿದ್ಧೋದ್ದೇಶಗಳ ಪುನರ್ವಸತಿ ಕಾರ್ಯಕರ್ತ ಜಾಕಿರ್ ಹುಸೇನ್, ತಾಲೂಕು ಪಂಚಾಯಿತಿ ಇಒ ಎಚ್.ಆರ್.ಗಿರೀಶ್, ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿ ನಟರಾಜ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೂವಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ತಾಲೂಕು ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಬಾನಲೋಚನಾ ಮುಂತಾದವರು ಹಾಜರಿದ್ದರು.