ಭೂಮಿ ಸ್ವಾಧೀನಕ್ಕೆ ಕ್ರಮ ಕೈಗೊಳ್ಳಿ: ಬಿವೈಆರ್

byr
ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಕಾಮಗಾರಿಗಳ ಬಗ್ಗೆ ಬಿ.ವೈ.ರಾಘವೇಂದ್ರ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದರು. ಗುರುದತ್ತ ಹೆಗಡೆ, ಹನುಮಂತಪ್ಪ, ಪ್ರಸನ್ನಕೃಷ್ಣ ಪಟಗಾರ್, ಮೋಹನ್‌ಕುಮಾರ್ ಮತ್ತಿತರರಿದ್ದರು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿಪಡಿಸಿದ ಕಾಲಮಿತಿಯಲ್ಲಿ ಪೂರ್ಣಗೊಳಿಸದೆ ಇರುವುದು ಬೇಸರದ ಸಂಗತಿ. ಅಗತ್ಯವಿರುವ ಭೂಮಿ ಸ್ವಾಧೀನಕ್ಕೆ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.

ನಗರದಲ್ಲಿ  ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾಧೀನ, ಅರಣ್ಯ ಸಂಬಂಧಿತ ಸಮಸ್ಯೆಗಳು ಮತ್ತು ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಶಿವಮೊಗ್ಗ ತಾಲೂಕಿನ ಕುಂಸಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಅಲ್ಲಿನ ರೈತರು ಭೂಮಿ ನೀಡಲು ಸಮ್ಮತಿಸಿದ್ದಾರೆ. ಅಂತಹ ರೈತರೊಂದಿಗೆ ಅಧಿಕಾರಿಗಳು ಒರಟಾಗಿ ವರ್ತಿಸಿರುವುದು ಅಕ್ಷಮ್ಯ ಎಂದರು.

ಸಂಬಂಧಿಸಿದ ಅಧಿಕಾರಿಗಳು ಹೆದ್ದಾರಿ ಹಾದುಹೋಗುವ ಪ್ರದೇಶಗಳ ವ್ಯಾಪ್ತಿ ಗ್ರಾಪಂಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಬೇಕು. ಅಗತ್ಯ ದಾಖಲೆ ಸಂಗ್ರಹಿಸಬೇಕು. ಅವರ ಸಮಸ್ಯೆ ಆಲಿಸಬೇಕು. ಸಮಾಧಾನದಿಂದ ವ್ಯವಹರಿಸಬೇಕು ಎಂದು ಸೂಚಿಸಿದರು.

ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾದೀನ ಪ್ರಕ್ರಿಯೆ ಕೈಗೊಳ್ಳುವ ಮುನ್ನ ಜಮೀನಿನ ಪೋಡಿ ಕಾರ್ಯ ಪೂರ್ಣಗೊಳಿಸಬೇಕು. ಆಸ್ತಿ ಹಾಗೂ ಅದರ ನಷ್ಟವನ್ನು ಸರಿಯಾದ ಪ್ರಮಾಣದಲ್ಲಿ ಅಂದಾಜು ಮಾಡಿ, ಹೆಚ್ಚಿನ ಪ್ರಮಾಣದ ಪರಿಹಾರ ಕೊಡಿಸುವತ್ತ ಗಮನ ಹರಿಸಬೇಕು. ಅನಗತ್ಯ ವಿಳಂಬ ಮಾಡದೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ರೈತರು ಸಹಕರಿಸದೆ ಇದ್ದರೆ ಭೂಸ್ವಾಧೀನದ ಒಟ್ಟು ಮೊತ್ತವನ್ನು ನ್ಯಾಯಾಲಯದ ಮೂಲಕ ಪಾವತಿಸಿ ಕಾಮಗಾರಿ ಆರಂಭಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೋಹನ್‌ಕುಮಾರ್, ಶಿವಶಂಕರ್, ಪ್ರಸನ್ನಕೃಷ್ಣ ಪಟಗಾರ್, ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ, ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net