ಅಂಕಪಟ್ಟಿ ವಿತರಣೆಗೆ ಕ್ರಮ ಕೈಗೊಳ್ಳಿ: ಎನ್‌ಎಸ್‌ಯುಐ ಆಗ್ರಹ

manavi
ಅಂಕಪಟ್ಟಿ ನೀಡುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವಂತೆ ಒತ್ತಾಯಿಸಿ ಪ್ರೊ.ಶರತ್ ಅನಂತಮೂರ್ತಿ ಅವರಿಗೆ ಎಸ್.ಎನ್.ವಿಜಯಕುಮಾರ್, ಹರ್ಷಿತ, ಚರಣ, ರವಿಕುಮಾರ್ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ಪದವಿ ಪೂರ್ಣಗೊಳಿಸಿದವರಿಗೆ ತ್ವರಿತವಾಗಿ ಅಂಕಪಟ್ಟಿ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಬಿಇಡಿ ಪಠ್ಯಕ್ರಮದಲ್ಲಿ ಆಗಿರುವ ಲೋಪವನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಎನ್‌ಎಸ್‌ಯುಐ ಪದಾಧಿಕಾರಿಗಳು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಕುವೆಂಪು ವಿವಿಯಿಂದ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿ ವಿರೋಧಿ ಮನಸ್ಥಿತಿ ಬೆಳೆಯುತ್ತಿದೆ. ದಂಡಸಮೇತ ಶುಲ್ಕ ಕಟ್ಟಿಸಿಕೊಂಡರೂ ಸಕಾಲದಲ್ಲಿ ಅಂಕಪಟ್ಟಿ ನೀಡುತ್ತಿಲ್ಲ. ಪ್ರಾವಿಷನಲ್ ಅಂಕಪಟ್ಟಿ ಎಂದು 485ರೂ. ವಸೂಲಿ ಮಾಡಲಾಗುತ್ತಿದೆ. ಇದು ಬಡ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಯಿತು.

ಉದ್ಯೋಗಕ್ಕೆ ಸೇರ್ಪಡೆಯಾಗಬೇಕೆಂಬ ಸಾವಿರಾರು ವಿದ್ಯಾರ್ಥಿಗಳು ಅಂಕಪಟ್ಟಿ ಸಿಗದ ಕಾರಣ ಪರಿತಪಿಸುವಂತಾಗಿದೆ. ಕೆಲವರಿಗೆ ಮುಂದಿನ ಶೈಕ್ಷಣಿಕ ವ್ಯವಸ್ಥೆಗಳು ತೊಂದರೆಯಾಗಿದೆ. ಅಂಕಪಟ್ಟಿಯ ಶುಲ್ಕ ಪಡೆದ ಮೇಲೂ ಅಂಕಪಟ್ಟಿ ನೀಡದೇ ಪ್ರಾವಿಷನಲ್ ಮಾರ್ಕ್‌ಕಾರ್ಡ್ ಹೆಸರಿನಲ್ಲಿ ಹಣ ಪಡೆಯುವುದೇಕೆ ಎಂದು ಪ್ರಶ್ನಿಸಿದರು.

ಬಿ.ಇಡಿ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೂ ಸಿಬಿಸಿಎಸ್ ಅಳವಡಿಸಿಕೊಳ್ಳದಿರುವ ಕಾರಣದಿಂದ ಈಗಾಗಲೇ ಬಿಇಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಎಬಿಸಿ ಎಂದು ನಮೂದಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಸಮಸ್ಯೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಲಾಯಿತು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಎಸ್.ಎನ್.ವಿಜಯಕುಮಾರ್, ಶಿವಮೊಗ್ಗ ನಗರಾಧ್ಯಕ್ಷ ಚರಣ, ಗ್ರಾಮಾಂತರ ಅಧ್ಯಕ್ಷ ಹರ್ಷಿತ್, ಪ್ರಮುಖರಾದ ರವಿಕುಮಾರ್, ಚಂದ್ರೋಜಿರಾವ್, ಶಶಿ ಕೀರ್ತಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net