

ಶಿವಮೊಗ್ಗ: ಹದಿನೈದು ದಿನಗಳಿಂದ ಸರಬರಾಜಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಶಾಸಕ ಎಸ್.ಎನ್.ಚನ್ನಬಸಪ್ಪ ಸೋಮವಾರ ಕೆ.ಆರ್. ವಾಟರ್ ವರ್ಕ್ಸ್‌ನ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ಡಿ.31ರೊಳಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಆರ್ ವಾಟರ್ ವರ್ಕ್ಸ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸತತವಾಗಿ ಮಳೆ ಆಗುತ್ತಿರುವುದರಿಂದ ನದಿ ನೀರು ಮಣ್ಣು ಮಿಶ್ರಿತವಾಗಿದೆ. ಇದೇ ಕಾರಣಕ್ಕೆ ಕುಡಿಯುವ ನೀರಿನ ಬಣ್ಣ ಕಂದು ಬಣ್ಣಕ್ಕೆ ತಿರುಗಿದೆ. ಇದನ್ನು ಸರಿಪಡಿಸಲು ಅಧಿಕಾರಿಗಳ ತಂಡ ನಿರಂತರವಾಗಿ ಕೆಲಸ ಮಾಡುತ್ತಿದೆ. ಶುದ್ಧೀಕರಣ ಘಟಕದಲ್ಲೂ ಕೆಲ ಲೋಪಗಳಿವೆ. ನಿರ್ಲಕ್ಷೃ ತೋರುವವರ ವಿರುದ್ಧ ಕ್ರಮ ಜರುಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಇನ್ನು ಮುಂದೆ ಈ ರೀತಿ ಘಟನೆ ಆಗದಂತೆ ಕ್ರಮ ಕೈಗೊಳ್ಳಬೇಕು. ನಗರ ನೀರು ಸರಬರಾಜು ಮಂಡಳಿಗೆ ನೀರಿನ ನಿರ್ವಹಣೆ ಹಾಗೂ ಪೂರೈಕೆ ಹೊಣೆಗಾರಿಕೆಯಿದೆ. ಪಾಲಿಕೆಯಿಂದ ಮಂಡಳಿ 100ಕ್ಕೂ ಹೆಚ್ಚು ಸಿಬ್ಬಂದಿ ನೀಡಿದೆ. ಶುದ್ಧೀಕರಣ ಘಟಕದಲ್ಲಿ ಮೂರು ಹಂತದ ಶುದ್ಧೀಕರಣ ಪ್ರಕ್ರಿಯೆ ಸಮಪರ್ಕವಾಗಿ ಆಗುತ್ತಿಲ್ಲ. ಪ್ರಯೋಗಾಲಯವೂ ಇಲ್ಲ ಎಂದರು.
ಕೆಆರ್ ವಾಟರ್ ವರ್ಕ್ಸ್‌ನಲ್ಲಿ ಸದ್ಯಕ್ಕೆ ಭೌತಿಕ, ರಾಸಾಯನಿಕ ಪರೀಕ್ಷೆಗಳು ನಡೆಯುತ್ತಿವೆ. ಬಯೋಲಾಜಿಕಲ್ ಪರೀಕ್ಷೆ ಮೆಗ್ಗಾನ್‌ನಲ್ಲಿ ನಡೆಯುತ್ತಿದೆ. ಶುದ್ಧೀಕರಣ ಘಟಕದಲ್ಲಿ ತಜ್ಞರ ಕೊರತೆ ಇದ್ದು, ಲ್ಯಾಬ್‌ಗೆ ಸಂಬಂಧಿಸಿದ ಎಲ್ಲ ನ್ಯೂನ್ಯತೆಗಳನ್ನು ಡಿ.31ರೊಳಗೆ ಸರಿಪಡಿಸುವುದಾಗಿ ಜಲಮಂಡಳಿ ಒಪ್ಪಿಕೊಂಡಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಜಲಮಂಡಳಿ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಎಇಇ ಮಿಥುನ್ ಕುಮಾರ್, ಸೂಡಾ ಮಾಜಿ ಅಧ್ಯಕ್ಷ ಎಸ್.ಜ್ಞಾನೇಶ್ವರ್, ನಾಗರಾಜ್ ಇತರರಿದ್ದರು.