

ಸರಗೂರು: ಸಂವಿಧಾನದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂದು ತಹಸೀಲ್ದಾರ್ ರುಕೀಯಾ ಬೇಗಂ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಶಾಲಾ, ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ಸಂದರ್ಭದಲ್ಲೇ ಮಕ್ಕಳು ಸಂವಿಧಾನದ ಮಹತ್ವ ಅರಿತಿರಬೇಕು ಎಂದರು. ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ನಮ್ಮ ಸಂವಿಧಾನ ಐತಿಹಾಸಿಕ ಮಹತ್ವ ಹೊಂದಿದೆ. ಅದನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು. ದಸಂಸ ಜಿಲ್ಲಾ ಸಂಚಾಲಕ ಇಟ್ನ ರಾಜಣ್ಣ, ಗ್ರಾಪಂ ಸದಸ್ಯ ಕುರ್ಣೇಗಾಲ ಬೆಟ್ಟಸ್ವಾಮಿ ಮಾತನಾಡಿದರು.
ಗ್ರೇಡ್ 2 ತಹಸೀಲ್ದಾರ್ ಪರಶಿವಮೂರ್ತಿ, ಸುನೀಲ್, ಶಿರಸ್ತೇದಾರ್ ಗುರುರಾಜು, ಕಸಾಪ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ದಸಂಸ (ಅಂಬೇಡ್ಕರ್ ವಾದ) ಸಂಚಾಲಕ ಕೂಡಿಗಿ ಗೋವಿಂದರಾಜು , ಗ್ರಾಪಂ ಮಾಜಿ ಅಧ್ಯಕ್ಷ ಗೋವಿಂದಾಚಾರಿ, ಪಪಂ ಅಧ್ಯಕ್ಷೆ ರಾಧಿಕಾ, ಪಪಂ ಸದಸ್ಯ ಚಲುವಕೃಷ್ಣ ಇತರರು ಇದ್ದರು.