

ನವದೆಹಲಿ: ತಬ್ಲಿಘ್ ಇ ಜಮಾತ್ ಆಯೋಜಿಸಿದ್ದ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದವರನ್ನೆಲ್ಲ ಹುಡುಕಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ. ಆದರೆ ಅವರು ತೀವ್ರ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ವರದಿಯಾಗಿದೆ.
ನಿಜಾಮುದ್ದೀನ್ ಮರ್ಕಜ್ ಮಸೀದಿಯ ಕಟ್ಟಡದಲ್ಲಿ ಇದ್ದವರನ್ನೆಲ್ಲ ಸ್ಥಳಾಂತರಗೊಳಿಸಲಾಗಿದೆ. ಅವರಿಗೆಲ್ಲ ದಕ್ಷಿಣ ದೆಹಲಿಯ ತುಘ್ಲಕ್ಬಾದ್ನಲ್ಲಿರುವ ರೈಲ್ವೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗಿದೆ.
ಈ ಸ್ಥಳದಲ್ಲಿ ಸುಮಾರು 167 ಮಸ್ಲಿಮರು ಕ್ವಾರಂಟೈನ್ನಲ್ಲಿ ಇದ್ದಾರೆ. ಆದರೆ ಅವರ ತಪಾಸಣೆಗೆ ಹೋದ ವೈದ್ಯರು, ನರ್ಸ್ಗಳು, ಆರೋಗ್ಯ ಸಿಬ್ಬಂದಿ ಬಳಿ ಹೀನಾಯವಾಗಿ ವರ್ತಿಸುತ್ತಿದ್ದಾರೆ. ತಪಾಸಣೆಗೆ ಸಹಕರಿಸುತ್ತಿಲ್ಲ. ಅದರಲ್ಲೂ ಕೆಲವರಂತೂ ವೈದ್ಯರು, ಆರೋಗ್ಯ ಸಿಬ್ಬಂದಿ ಮೇಲೆ ಉಗುಳುತ್ತಿದ್ದಾರೆ. ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ರೈಲು ಇಲಾಖೆ ವಕ್ತಾರ ಬುಧವಾರ ರಾತ್ರಿ ತಿಳಿಸಿದ್ದಾರೆ.
ನಿಜಾಮುದ್ದೀನ್ ಮಸೀದಿ ಸದ್ಯ ಕರೊನಾ ವೈರಸ್ ಹಾಟ್ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಮಾ.13ರಿಂದ 15ರವರೆಗೆ ತಬ್ಲಿಘಿ ಜಮಾತ್ ನಡೆಸಿದ್ದ ಸಭೆಯಲ್ಲಿ ಪಾಲ್ಗೊಂಡ ಹಲವರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದುವರೆಗೆ 10 ಮಂದಿ ಮೃತಪಟ್ಟಿದ್ದಾರೆ.
ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರ ಪತ್ತೆಕಾರ್ಯ ಇದೀಗ ದೇಶಾದ್ಯಂತ ಚುರುಕಾಗಿ ನಡೆಯುತ್ತಿದೆ. ಸಿಕ್ಕವರನ್ನೆಲ್ಲ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ.
ಮಸೀದಿಯ ಕಟ್ಟಡದಲ್ಲಿ ಇದ್ದ 167 ಮಂದಿಯನ್ನು ರೈಲ್ವೆ ಕಾಲನಿ ಬಳಿ ಪ್ರತ್ಯೇಕವಾಗಿ ಇಡಲಾಗಿದ್ದು, ಸ್ಥಳೀಯರಿಗೆ ಆತಂಕ ಶುರುವಾಗಿದೆ. ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಆಡಳಿತ ಬಳಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಕ್ವಾರಂಟೈನ್ನಲ್ಲಿ ಇರುವ ಮುಸ್ಲಿಮರು ವೈದ್ಯಕೀಯ ಸಿಬ್ಬಂದಿಗೆ ತೀವ್ರ ತೊಂದರೆ ಕೊಡುತ್ತಿದ್ದಾರೆ. ಏನಾದರೂ ಆಹಾರ ಕೊಟ್ಟರೆ ಅದಕ್ಕೂ ಪ್ರತಿರೋಧ ಒಡ್ಡುತ್ತಿದ್ದಾರೆ.
ವೈದ್ಯರು, ನರ್ಸ್ಗಳು ಹತ್ತಿರ ಹೋದರೆ ಉಗುಳುತ್ತಿದ್ದಾರೆ. ಕ್ವಾರಂಟೈನ್ ಇದ್ದಲ್ಲಿ ಬರಬೇಡಿ. ನಮಗೆ ತೊಂದರೆ ಕೊಡಬೇಡಿ ಎನ್ನುತ್ತಿದ್ದಾರೆ. ಹಾಗೇ ಎಲ್ಲಕಡೆ ಓಡಾಡುತ್ತಿದ್ದರೆ ಎಂದು ವಕ್ತಾರ ದೀಪಕ್ ಕುಮಾರ್ ವಿವರಿಸಿದ್ದಾರೆ.
ಇಲ್ಲಿರುವವರನ್ನು ನಿಯಂತ್ರಣ ಮಾಡುವುದು ಕಷ್ಟವಾಗುತ್ತಿದೆ. ಹಾಗಾಗಿ ಸೂಕ್ತ ಭದ್ರತೆ ನೀಡಿ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಮನವಿ ಮಾಡಿದ್ದೆವು. ಹಾಗಾಗಿ ಆರು ಸಿಆರ್ಪಿಎಫ್ ಸಿಬ್ಬಂದಿ, ದೆಹಲಿ ಪೊಲೀಸ್ ಪೇದೆಗಳನ್ನು ಇಲ್ಲಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಿಜಾಮುದ್ದೀನ್ ಮಸೀದಿಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ದೆಹಲಿ ನಿವಾಸಿಗಳಿಗೆ ಅಲ್ಲಿಯೇ ಹಲವು ಪ್ರದೇಶಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಆದರೆ ಸ್ಥಳೀಯರು ತುಂಬ ಆತಂಕದಲ್ಲಿದ್ದಾರೆ. (ಏಜೆನ್ಸೀಸ್)