

ನವದೆಹಲಿ: ಖ್ಯಾತ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ಹೃದಯ ಸಂಬಂಧಿ ಕಾಯಿಲೆಯಿಂದ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೊದ ಆಸ್ಪತ್ರೆಗೆ ಭಾನುವಾರ ದಾಖಲಿಸಲಾಗಿದೆ. ನುರಿತ ವೈದ್ಯರ ನಿಗಾದಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಜಾಕಿರ್ ಹುಸೇನ್ ಆಸ್ಪತ್ರೆಗೆ ದಾಖಲಾಗಿರುವುದನ್ನು ಅವರ ಹತ್ತಿರದ ಸಂಬಂಧಿ ಅಯುಬ್ ಔಲಿಯಾ ಖಚಿತಪಡಿಸಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಮಾಡುವಂತೆ ಅಭಿಮಾನಿಗಳಿಗೆ ಅಯುಬ್ ಮನವಿ ಮಾಡಿದ್ದಾರೆ. ಭಾನುವಾರ ರಾತ್ರಿ ಜಾಕಿರ್ ನಿಧನರಾದರೆಂದು ಸುದ್ದಿ ವ್ಯಾಪಕವಾಗಿ ಹರಡಿತ್ತು. ಹಲವಾರು ಮಾಧ್ಯಮ ಸಂಸ್ಥೆಗಳು ಇದನ್ನು ಪ್ರಕಟಿಸಿದ್ದವು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಸಚಿವರೊಬ್ಬರ ಎಕ್ಸ್ ಖಾತೆಯಲ್ಲಿ, ‘ಜಾಕಿರ್ ನಿಧನರಾದರು’ ಎಂಬ ಮಾಹಿತಿ ಪೋಸ್ಟ್ ಆಗಿತ್ತು. ಬಳಿಕ ಆ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಯಿತು. ಅದಾಗಿ ಕೆಲವೇ ನಿಮಿಷಗಳಲ್ಲಿ ಜಾಕಿರ್ ಅವರ ಸಂಬಂಧಿ ಅಯುಬ್ ಅವರು ಸಾವಿನ ಸುದ್ದಿ ವದಂತಿ ಎಂದು ಖಚಿತಪಡಿಸಿದ್ದು, ಜಾಕಿರ್ ಅವರ ಚೇತರಿಕೆಗಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.