

ತಿ.ನರಸೀಪುರ: ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಾವೇರಿ ಕಬಿನಿ ರೈತರ ಹಿತರಕ್ಷಣಾ ಸಮಿತಿ ವಿವಿಧ ಸಂಘಟನೆಗಳೊಂದಿಗೆ ಕರೆ ನೀಡಿದ್ದ ತಿ.ನರಸೀಪುರ ಬಂದ್ ಯಶಸ್ವಿಯಾಗಿದೆ. ಅಲ್ಲದೆ, ಬೆಂಗಳೂರು ಬಂದ್‌ಗೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.
ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಸೇರಿದ ರೈತ ಮುಖಂಡರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಕಾಲೇಜು ರಸ್ತೆ, ಲಿಂಕ್ ರಸ್ತೆ, ಪುರಸಭಾ ರಸ್ತೆ ಹಾಗೂ ತಾಲೂಕು ಕಚೇರಿ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್ ಮಾತನಾಡಿ, ರಾಜ್ಯದ ಜನತೆಗೆ ಅನ್ಯಾಯವಾದಾಗ ಎಲ್ಲರೂ ಪಕ್ಷ ಭೇದ ಮರೆತು ಹೋರಾಟ ಮಾಡಬೇಕು. ತಮಿಳುನಾಡಿನವರು ಕೇಳುವ ಮೊದಲೇ ರಾಜ್ಯ ಸರ್ಕಾರ ನೀರು ಹರಿಸಿರುವುದು ಸರಿಯಲ್ಲ. ಅಧಿಕಾರಿಗಳು ಹಿಂದಿನ ಮಾಹಿತಿ, ಮುಂದೆ ಆಗಬಹುದಾದ ಪರಿಣಾಮಗಳ ಮಾಹಿತಿ ಕಲೆ ಹಾಕಬೇಕಿತ್ತು. ನಂತರ ನೀರು ಬಿಡುವ ಬಗ್ಗೆ ತೀರ್ಮಾನಕ್ಕೆ ಬರಬೇಕಿತ್ತು. ನೀರನ್ನು ಎಷ್ಟು ಪ್ರಮಾಣದಲ್ಲಿ ಬಿಡಬೇಕು, ಬಿಟ್ಟರೆ ರಾಜ್ಯಕ್ಕಾಗುವ ಅನಾಹುತಗಳೇನು? ಯಾವ ಸಂಧರ್ಭದಲ್ಲಿ ನೀರು ಬಿಡಬೇಕಿತ್ತು ಎಂಬ ಸಾಮಾನ್ಯ ಜ್ಞಾನ ಸರ್ಕಾರಕ್ಕೆ ಇಲ್ಲವಾಗಿದೆ. ಹಾಗಾಗಿ ಈಗ ನೀರು ಬಿಟ್ಟು ರಾಜ್ಯದ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದ ಜನರಿಗೆ ಕುಡಿಯುವ ನೀರಿಗೂ ತತ್ವಾರವಾಗಲಿದೆ. ಪ್ರತಿಭಟನೆ ತೀವ್ರಗೊಳ್ಳುವ ಮೊದಲೇ ಎಚ್ಚೆತ್ತುಕೊಂಡು ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು. ರಾಜ್ಯದ ರೈತರಿಗೆ ಪದೇ ಪದೆ ಅನ್ಯಾಯ ಮಾಡಲಾಗುತ್ತಿದೆ. ಇದೇ ಮುಂದುವರಿದರೆ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರು ದಿಟ್ಟ ನಿರ್ಧಾರ ತೆಗೆದುಕೊಂಡು ಆದೇಶದ ವಿರುದ್ಧ ಸಿಡಿದೆದ್ದು ತಮಿಳುನಾಡಿಗೆ ನೀರು ಬಿಡದೆ ರಾಜ್ಯದ ರೈತರ ಹಿತ ಕಾಪಾಡಿದ್ದರು. ಈಗಿನ ಸರ್ಕಾರ ಅದೇ ದಿಟ್ಟತನ ಪ್ರದರ್ಶನ ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾವೇರಿ ನದಿ ನೀರಿನ ವಿಚಾರದಲ್ಲಿ ನಾಡಿನ ಜನತೆಯ ಪರವಾಗಿ ನಿಲ್ಲುತ್ತಿದ್ದರು. ನದಿಯಲ್ಲಿನ ನೀರಿನ ಪ್ರಮಾಣ, ನಿರ್ವಹಣೆ ಬಗ್ಗೆ ಜ್ಞಾನ ಹೊಂದಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲೂ ಕಾವೇರಿ ಸಮಸ್ಯೆ ಬಗೆಹರಿಸಿದ ಉದಾಹರಣೆ ಸಹ ಇದೆ ಎಂದು ತಿಳಿಸಿದರು.
ಮುಖಂಡ ಕೆ.ಎನ್.ಪ್ರಭುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕೂಡಲೇ ತಮಿಳುನಾಡಿಗೆ ನೀರು ನಿಲ್ಲಿಸಬೇಕು. ರಾಜ್ಯದ ಸಮಸ್ಯೆ ಬಗೆಹರಿಸಲು ಪ್ರಧಾನಿ ಮುಂದಾಗಬೇಕು ಎಂದು ಮನವಿ ಮಾಡಿದರು.
ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಡಾ.ಎಸ್.ಚಂದ್ರಶೇಖರ್ ಮಾತನಾಡಿ, ರಾಜ್ಯದ ರೈತರ ಹಿತವನ್ನು ಕಾಪಾಡಬೇಕಾದ ಸರ್ಕಾರ ನೆರೆಯ ರಾಜ್ಯದ ರೈತರ ಹಿತವನ್ನು ಕಾಪಾಡಲು ಮುಂದಾಗಿರುವುದು ವಿಪರ್ಯಾಸ. ಅವಕಾಶವಾದಿ ರಾಜಕಾರಣ ಮಾಡುತ್ತಿರುವ ಸರ್ಕಾರ ರಾಜ್ಯದ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಕಾವೇರಿ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿ ಸಂಚಾಲಕ ಕಿರಗಸೂರು ಶಂಕರ್ ಮಾತನಾಡಿ, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರ ಕೂಡಲೇ ವಿಧಾನಸಭೆ ಅಧಿವೇಶನ ಕರೆದು ಸಮಗ್ರವಾಗಿ ಚರ್ಚಿಸಿ ಸಂಕಷ್ಟ ಸೂತ್ರ ಜಾರಿ ಮಾಡುವ ತನಕ ನೀರು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನೀಡಬೇಕು. ರಾಜಕೀಯ ಪಕ್ಷಗಳ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಕೂಡಲೇ ರದ್ದು ಮಾಡಬೇಕು. ನೂತನ ಪ್ರಾಧಿಕಾರ ರಚಿಸಿ ನಾಲ್ಕು ರಾಜ್ಯಗಳ ಪರಿಣಿತರು, ನೀರಾವರಿ ತಜ್ಞರು, ರೈತ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬಂದ್ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿಲ್ಲ. ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ವಿರಳವಾಗಿತ್ತು. ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪೆಟ್ರೋಲ್ ಬಂಕ್ ಮಾಲೀಕರು ಸೇವೆ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಬಂದ್‌ಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘ, ದಲಿತ ಸಂಘರ್ಷ ಸಮಿತಿ, ನಯಜನ ಕ್ಷತ್ರಿಯ ಸಂಘ, ಮಡಿವಾಳ ಸಂಘ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವರ್ತಕರ ಸಂಘ, ಟೈಲರ್ ಸಂಘ, ಆರ್ಯವೈಶ್ಯ ಸಂಘ, ತಿ.ನರಸೀಪುರ ಟೌನ್ ಗಿರಿವಿ ಮಾಲೀಕರ ಸಂಘ, ರಸ್ತೆಬದಿ ವ್ಯಾಪಾರಿಗಳ ಸಂಘ, ಕಾರ್ಮಿಕರ ಸಂಘಗಳು ಬೆಂಬಲ ನೀಡಿದ್ದವು.
ಜೆಡಿಎಸ್ ಮಾಧ್ಯಮ ವಕ್ತಾರ ತಾಯೂರು ಪ್ರಕಾಶ್, ಯಡದೊರೆ ಮಹದೇವಯ್ಯ, ಕುರುಬೂರು ಸಿದ್ದೇಶ್, ಸೋಸಲೆ ರಾಜಶೇಖರ್, ಬನ್ನಳ್ಳಿ ಸೋಮಣ್ಣ, ಕೆಂಪಯ್ಯನಹುಂಡಿ ರಾಜು, ತುಂಬಲ ಮಂಜುನಾಥ್, ನಿಂಗರಾಜು, ನಾಗೇಂದ್ರ, ಕಳ್ಳಿಪುರ ಮಹದೇವಸ್ವಾಮಿ, ಪುಟ್ಟಸ್ವಾಮಿ, ಹುಣಸೂರು ಪುಟ್ಟಯ್ಯ, ರುದ್ರ, ಸಿ.ಪುಟ್ಟಮಲ್ಲಯ್ಯ, ಕಿರಗಸೂರು ಪ್ರಸಾದ್ ನಾಯಕ್, ಸ್ವಾಮಿಗೌಡ, ಸುರೇಶ್, ಎಲ್.ಸಿದ್ದರಾಜು, ಅಪ್ಪಣ್ಣ, ಕುಮಾರ್, ನಿಂಗರಾಜು, ಕುರುಬೂರು ಪ್ರದೀಪ, ಯಾಕನೂರು ರಾಜೇಶ್, ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ, ಮನೋಜ್, ನಾಗರಾಜು, ಕರೋಹಟ್ಟಿ ಮಹಾದೇವಯ್ಯ, ಡಾ.ಮಾದೇಶ್, ಸಿಬಿ ಹುಂಡಿ ಚಿನ್ನಸ್ವಾಮಿ, ಸೋಸಲೆ ರಾಜೇಶ, ರಾಜಣ್ಣ, ಶಿವಕುಮಾರ್, ಸಾಗರ್, ಕರೋಹಟ್ಟಿ ಉಮೇಶ್ ಇದ್ದರು.