ಮೂಗೂರಿನಲ್ಲಿ ಅದ್ದೂರಿ ವೈಮಾಳಿಗೆ ಉತ್ಸವ

Photo 3
Published on

ತಿ.ನರಸೀಪುರ: ತಾಲೂಕಿನ ಮೂಗೂರು ಗ್ರಾಮದ ಶ್ರೀತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಕಡೆಯ ದಿನವಾದ ಮಂಗಳವಾರ ವೈಮಾಳಿಗೆ ಉತ್ಸವ ಧಾರ್ಮಿಕ ವಿಧಿವಿಧಾನದೊಂದಿಗೆ ನೆರವೇರಿತು.

ಉತ್ಸವದ ಅಂಗವಾಗಿ ಬೆಳಗ್ಗೆ 10 ಗಂಟೆಗೆ ವಿವಿಧ ಹೂಗಳಿಂದ ಸಿಂಗಾರಗೊಂಡಿದ್ದ ಪಲ್ಲಕ್ಕಿಯಲ್ಲಿ ಅಮ್ಮನವರ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ಮಂಗಳವಾದ್ಯ ಹಾಗೂ ಗೊರವರ ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಬಂಡಿ ಬೀದಿ ನಿವಾಸಿ ಬಸವಣ್ಣ ಅವರ ಕುಟುಂಬದವರು ನರ್ತಕಿ ಪಲ್ಲಕ್ಕಿ ಉತ್ಸವದ ಉಸ್ತುವಾರಿ ವಹಿಸಿಕೊಂಡಿದ್ದರು.

ದೇವಾಲಯದ ಒಳಾಂಗಣವನ್ನು ಪ್ರವೇಶಿಸಿದ ಉತ್ಸವಮೂರ್ತಿಯನ್ನು ಮಧ್ಯಾಹ್ನದ ನಂತರ ಅಲಂಕೃತ ಹೂವಿನ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ದೇವಾಲಯದ ಮೇಲ್ಭಾಗದಲ್ಲಿ 5 ಸುತ್ತು ಹಾಗೂ ದೇವಾಲಯ ಪ್ರಾಂಗಣದಲ್ಲಿ 7 ಸುತ್ತು ಪ್ರದಕ್ಷಿಣೆ ಹಾಕಿಸಿ ದೇವಾಲಯದ ದಕ್ಷಿಣ ದ್ವಾರದ ಮೂಲಕ ಒಳ ಪ್ರವೇಶಿಸಿತು.

ದೇವಾಲಯದಲ್ಲಿ ಹಾಜರಿದ್ದ ಸುಮಂಗಲಿಯರು ತಮ್ಮ ಕುಟುಂಬದ ಶ್ರೇಯಸ್ಸು ಹಾಗೂ ದೀರ್ಘ ಸುಮಂಗಲಿಯಾಗಿರಲೆಂದು ಪ್ರಾರ್ಥಿಸಿ ಅಮ್ಮನವರಿಗೆ ಹಣ್ಣು, ಹೂ, ನಗದನ್ನು ಅರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಅಮ್ಮನವರಿಗೆ ಜೈಕಾರ ಹಾಕಿ ಈಡುಗಾಯಿ ಅರ್ಪಿಸಿದರು.
ರಾತ್ರಿ 11 ಗಂಟೆಗೆ ದೇವಾಲಯವನ್ನು ಸ್ವಚ್ಛಗೊಳಿಸಿ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡುವ ಮುಖಾಂತರ ಈ ಬಾರಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಕುಟುಂಬ ವರ್ಗದವರು ಅಮ್ಮನವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. 5 ದಿನಗಳ ಕಾಲ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತರ ಮನಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net