ತುಮಕೂರು: ಅಂದಿನ ಕೆಪಿಸಿಸಿ ಸಾರಥಿಯಾಗಿ ಸ್ವಾಭಾವಿಕವಾಗಿಯೇ ಸಿಎಂ ಅಭ್ಯರ್ಥಿ ರೇಸ್‌ನಲ್ಲಿದ್ದ ಡಾ.ಜಿ.ಪರಮೇಶ್ವರ ಅವರನ್ನು 2013ರಲ್ಲಿ ಸೋಲಿಸಿದ ಅಪಖ್ಯಾತಿ ಇಂದಿಗೂ ಕೊರಟಗೆರೆ ಕ್ಷೇತ್ರಕ್ಕಿದೆ.
ಕಾಂಗ್ರೆಸ್‌ನ ಪ್ರಮುಖ ನಾಯಕ ಡಾ.ಜಿ.ಪರಮೇಶ್ವರ ಸ್ಪರ್ಧೆ ಕಾರಣಕ್ಕೆ ಕೊರಟಗೆರೆ ಕ್ಷೇತ್ರ ರಾಜ್ಯ ರಾಜಕೀಯದ ಪ್ರತಿಷ್ಠೆಯ ಕ್ಷೇತ್ರಗಳಲ್ಲೊಂದಾಗಿದೆ. 2008ರ ಕ್ಷೇತ್ರ ಮರುವಿಂಗಡಣೆ ಬಳಿಕ ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದು, ಕಾಂಗ್ರೆಸ್, ಜೆಡಿಎಸ್ ನಡುವೆಯೇ ಬಿಗ್‌ಫೈಟ್ ಇದೆ.
2008ರಲ್ಲಿ ಗೆದ್ದಿದ್ದ ಪರಮೇಶ್ವರ ಅವರನ್ನು 2013ರಲ್ಲಿ ಜನರು ಸೋಲಿಸಿದ್ದು ಇತಿಹಾಸ. ಜೆಡಿಎಸ್ ಅಭ್ಯರ್ಥಿ ಪಿ.ಆರ್.ಸುಧಾಕರ್‌ಲಾಲ್ ಕೂಡ ಸಜ್ಜನಿಕೆ, ಸುಶಿಕ್ಷಿತ ರಾಜಕಾರಣಿ ಎನಿಸಿದ್ದು ಇಬ್ಬರ ನಡುವೆಯೇ ಈ ಚುನಾವಣೆಯಲ್ಲಿ ಜಿದ್ದಾಜಿದ್ದಿ ನಡೆಯಲಿದೆ. ಸೂಕ್ತ ಅಭ್ಯರ್ಥಿಗಳಿಲ್ಲದ ಬಿಜೆಪಿ ಪ್ರತಿ ಚುನಾವಣೆಯಲ್ಲಿಯೂ ಹೊರಗಿನವರಿಗೆ ಮಣೆ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿದೆ, ಈ ಬಾರಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ಕ್ಷೇತ್ರದಲ್ಲಿ ಓಡಾಡಲಾರಂಭಿಸಿದ್ದಾರೆ.
ಗೆದ್ದುಹೋದ ಬಳಿಕ ಕ್ಷೇತ್ರ ಮರೆಯುತ್ತಾರೆ ಎಂಬ ಆರೋಪ ಸುಳ್ಳಾಗಿಸಲು ಪರಮೇಶ್ವರ ಕ್ಷೇತ್ರದಲ್ಲಿ ಸುತ್ತಲಾರಂಭಿಸಿದ್ದಾರೆ, ಸಾರ್ವಜನಿಕ ಸಭೆಗಳಲ್ಲಿ ಕಣ್ಣೀರು ಸುರಿಸಿ ಅನುಕಂಪ ಗಿಟ್ಟಿಸಿಕೊಳ್ಳುವ ಜತೆಗೆ ಬಾಡೂಟ, ಕ್ರೀಡೆ, ರಸಮಂಜರಿ ಸೇರಿ ಎಲ್ಲ ತಂತ್ರಗಳನ್ನು ಪ್ರಯೋಗಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಪಿ.ಆರ್.ಸುಧಾಕರಲಾಲ್ ಕ್ಷೇತ್ರದ ಜನರ ನಾಡಿಮಿಡಿತ ಬಲ್ಲವರು. ಮೂರು ಬಾರಿ ಜಿಪಂ ಸದಸ್ಯರಾಗಿದ್ದ ಲಾಲ್, 2013ರಲ್ಲಿ ಪರಮೇಶ್ವರಗೆ ಸೋಲಿನ ರುಚಿ ತೋರಿಸಿದ್ದರು. ಮಿತಭಾಷಿ, ಸೌಮ್ಯಸ್ವಭಾವದರು. ದೊಡ್ಡವರನ್ನು ಸೋಲಿಸಿದನೆಂಬ ಜಂಭವಿಲ್ಲದ ಲಾಲ್ ಬಗ್ಗೆ ಇಲ್ಲಿನ ಜನರ ಸಾಫ್ಟ್ ಕಾರ್ನರ್ ಇನ್ನೂ ಇದೆ.
ಕೊನೆಯ ಚುನಾವಣೆ ಪರಂ ‘ಅಸ್ತ್ರ’: ಕ್ಷೇತ್ರದ ಜನರೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಬೆರೆಯುವ ಮೂಲಕ ಗೆಲುವಿಗೆ ಟೊಂಕ ಕಟ್ಟಿರುವ ಡಾ.ಜಿ.ಪರಮೇಶ್ವರ ಇದು ನನ್ನ ಕೊನೆಯ ಚುನಾವಣೆ ಎಂದು ಭಾವನಾತ್ಮಕವಾಗಿ ಜನರನ್ನು ಸೆಳೆಯಲು ಮುಂದಾಗಿದ್ದಾರೆ. 2013ರ ಸೋಲಿನ ಬಗ್ಗೆ ಪದೇಪದೆ ವೇದಿಕೆಗಳಲ್ಲಿ ಪ್ರಸ್ತಾಪಿಸಿ ಜನರ ಅನುಕಂಪದ ತಂತ್ರಕ್ಕೂ ಸೈ ಎಂದಿದ್ದಾರೆ. 2018ರ ಚುನಾವಣೆಯಲ್ಲಿದ್ದಂತೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಬಲ ಈ ಚುನಾವಣೆಯಲ್ಲಿ ಪರಮ್‌ಗೆ ಇಲ್ಲದಾಗಿದ್ದು, ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಒಕ್ಕಲಿಗ ಮತಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ದಲಿತ ಸಮುದಾಯದ ಎಡ, ಬಲ ಲೆಕ್ಕಾಚಾರದ ಅರಿವಿರುವ ಬಿಜೆಪಿ ಎಡ ಸಮುದಾಯದ ಅನಿಲ್‌ಕುಮಾರ್‌ಗೆ ಮಣೆ ಹಾಕುವ ಸಾಧ್ಯತೆಯಿದೆ. ಗಂಗಹನುಮಯ್ಯ, ಡಾ.ಲಕ್ಷ್ಮೀಕಾಂತ್, ಮುನಿಯಪ್ಪ ಕೂಡ ಬಿಜೆಪಿ ಟಿಕೆಟ್ ಪೈಪೋಟಿಯಲ್ಲಿದ್ದಾರೆ. ಎಡ,ಬಲ ಲೆಕ್ಕಾಚಾರಗಳ ಮೇಲೆ ಬಿಜೆಪಿ ಕೂಡ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿದ್ದೇ ಆದಲ್ಲಿ ಕ್ಷೇತ್ರದಲ್ಲಿ ತಿಕ್ರೋನ ಸ್ಪರ್ಧೆ ಏರ್ಪಡಲಿದೆ. ಇಲ್ಲದಿದ್ದರೆ ಕಾಂಗ್ರೆಸ್-ಜೆಡಿಎಸ್ ನಡುವೆ ನೇರಾ ಸ್ಫರ್ಧೆ ಫಿಕ್ಸ್.
ಜಾತಿವಾರು ಲೆಕ್ಕಾಚಾರ(ಅಂದಾಜು)
ಪರಿಶಿಷ್ಟ ಜಾತಿ 49500
ಒಕ್ಕಲಿಗ 43000
ಪರಿಶಿಷ್ಟ ಪಂಗಡ 18000
ಕಾಡುಗೊಲ್ಲರು 19000
ಕುರುಬರು 12000
ಮುಸ್ಲಿಂ 10000
ತಿಗಳರು 10200
ಇತರ 25466
2013ರ ಚುನಾವಣೆ ಲಿತಾಂಶ
ಅಭ್ಯರ್ಥಿ ಪಕ್ಷ ಪಡೆದಮತ
ಪಿ.ಆರ್.ಸುಧಾಕರಲಾಲ್ ಜೆಡಿಎಸ್ 72229
ಡಾ.ಜಿ.ಪರಮೇಶ್ವರ ಕಾಂಗ್ರೆಸ್ 54074
ವಾಲೆಚಂದ್ರಯ್ಯ ಕೆಜೆಪಿ 15738
ಪೆದ್ದರಾಜು ಬಿಜೆಪಿ 3080
2008ರ ಚುನಾವಣೆ ಲಿತಾಂಶ
ಅಭ್ಯರ್ಥಿ ಪಕ್ಷ ಪಡೆದಮತ
ಜಿ.ಪರಮೇಶ್ವರ ಕಾಂಗ್ರೆಸ್ 49271
ವಾಲೆಚಂದ್ರಯ್ಯ ಜೆಡಿಎಸ್ 37719
ಗಂಗಹನುಮಯ್ಯ ಬಿಜೆಪಿ 31745
+ಸಿಎಂ ರೇಸ್‌ನಲ್ಲಿರುವ ಅಭ್ಯರ್ಥಿ
+ಕಳೆದ ಐದು ವರ್ಷದಲ್ಲಿನ ಅಭಿವೃದ್ಧಿ ಕಾರ್ಯ
+ಕೊನೆಯ ಚುನಾವಣೆ ಎಂಬ ಅಸ್ತ್ರ
-ಚುನಾವಣೆ ಹೊಣೆಗೆ ಹೊರಗಿನವರು
-ಮತದಾರರ ಜತೆ ನೇರ ಸಂಪರ್ಕವಿಲ್ಲ
-ದಲಿತ ಒಳಪಂಗಡಗಳ ಕದನ
+ಸಜ್ಜನ, ಸುಶಿಕ್ಷಿತ ವ್ಯಕ್ತಿತ್ವ
+ಜೆಡಿಎಸ್ ಪರವಾಗಿರುವ ಒಕ್ಕಲಿಗ ಮತ
+ಶಾಸಕರಾಗಿ ಮಾಡಿದ್ದ ಅಭಿವೃದ್ಧಿ ಕಾರ್ಯ
-ಪರಮೇಶ್ವರ ವಿರುದ್ಧ ಮಂಕಾಗುವ ನಾಯಕತ್ವ
-ಕೆಲವು ಸ್ಥಳೀಯ ಮುಖಂಡರ ಬೇಸರ
-ಕ್ಷೇತ್ರ ಬಿಟ್ಟು ಹೊರಹೋಗದ ನಾಯಕತ್ವ