ಕೈಯಲ್ಲಿ ಖಡ್ಗ... ಬಗಲಲ್ಲಿ ಸಂವಿಧಾನ...!

sadananda
Published on
Desha Kala Hariprakash Konemane

ಹಿಂದೆ ವಂದೇಮಾತರಂ ಗೀತೆಯಲ್ಲಿ ಭಾರತ ಮಾತೆಯನ್ನು ದುರ್ಗೆ, ಲಕ್ಷ್ಮೀ, ಸರಸ್ವತೀ ರೂಪದಲ್ಲಿ ಕಾಣುವ ಭಾಗವನ್ನು ಕತ್ತರಿಸಿದವರು, ಸರಸ್ವತೀ ವಂದನೆಯನ್ನು ವಿರೋಧಿಸಿದವರು ಈಗ ಕೇರಳದ ಶಾಲೆ-ದೇವಸ್ಥಾನಗಳಲ್ಲಿ ಗುರುಪೂರ್ಣಿಮೆಯನ್ನು ತಡೆಯುತ್ತಿದ್ದಾರೆ. ಈಗಲೂ ಹೀಗಾದರೆ 25-30 ವರ್ಷಗಳ ಹಿಂದಿನ ಸ್ಥಿತಿಗತಿ ಹೇಗಿರಬಹುದು ಎಂಬುದನ್ನು ಊಹಿಸಿ. ಈ ಹೇಳಿಕೆಯನ್ನು ಕಾಂಗ್ರೆಸ್ಸಿಗರು ಶಾಂತವಾಗಿ ಕೇಳಿಸಿಕೊಳ್ಳಬೇಕು.

1958ರ ಜನವರಿ 15ರ ಎಐಸಿಸಿ ಎಕನಾಮಿಕ್ ರಿವ್ಯೂನಲ್ಲಿ ‘ದಿ ಬೇಸಿಕ್ ಅಪೋ›ಚ್’ ಎಂಬ ತಲೆ ಬರೆಹದ ಲೇಖನದಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಬರೆಯುತ್ತಾರೆ- ‘ಕಮ್ಯುನಿಸ್ಟ್ ಅಂದರೆ ಹಿಂಸೆ, ಕಮ್ಯುನಿಸ್ಟ್ ಎಂದರೆ ನಿರಂಕುಶವಾದ, ಕಮ್ಯುನಿಸ್ಟ್ ಎಂದರೆ ಪ್ರಜಾತಂತ್ರ ವಿರೋಧಿ, ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ಗಾಂಧಿ ತತ್ವಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ!’

ಎಡಪಂಥೀಯರ ಬಗ್ಗೆ ಇಂಥದ್ದೊಂದು ಅಭಿಪ್ರಾಯ ಹೊಂದಿದ್ದ ನೆಹರು, ಮುಂದೆ ರೆವಲ್ಯೂಷನರಿ ಕಮ್ಯುನಿಸ್ಟ್ ಪಾರ್ಟಿ ಎಂಬ ರಾಜಕೀಯ ಪಕ್ಷವನ್ನು ಭಾರತದಲ್ಲಿ ನಿಷೇಧಿಸಿದರು. ಹೈದರಾಬಾದಿನಲ್ಲಿ ಹಿಂಸೆಗಿಳಿದ 800ಕ್ಕೂ ಹೆಚ್ಚು ಕಮ್ಯುನಿಸ್ಟ್ ಕಾರ್ಯಕರ್ತರನ್ನು ಸೇನೆ ಬಳಸಿ ಬಂಧಿಸಿದರು. ಈ ವಿವರಣೆಯನ್ನು ಸ್ವತಃ ನೆಹರು ಅವರೇ ಸಂಸತ್ತಿನಲ್ಲಿ ನೀಡಿದ್ದರು. ಆದರೆ ದುರಂತ ಎಂದರೆ, ಅದೇ ನೆಹರು ಕಮ್ಯುನಿಸ್ಟ್ ಚಿಂತನೆಯನ್ನು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಜಾರಿಗೆ ತಂದರು. ಕಮ್ಯುನಿಸಂ ಪ್ರೇರಿತ ಇತಿಹಾಸಕಾರರಿಗೆ ರಾಜಾಶ್ರಯ ನೀಡಿ ಬೆಳೆಸಿದರು. ಕೇವಲ ಕಮ್ಯುನಿಸ್ಟರನ್ನು ಮಾತ್ರವಲ್ಲ, ಮುಸ್ಲಿಂ ಮೂಲಭೂತವಾದಿಗಳನ್ನು ನೆಹರು ಅವರು ಜತನದಿಂದ ಪೋಷಣೆ ಮಾಡಿ ಬೆಳೆಸಿದರು. ಕಮ್ಯುನಿಸ್ಟ್ ಚಿಂತನೆಯನ್ನು ಶಿಕ್ಷಣದಲ್ಲಿ ಮತ್ತು ಇತಿಹಾಸದಲ್ಲಿ ತುರುಕಲು ಮುಖ್ಯ ಕಾರಣ ನೆಹರು ಅವರು ಮೈಗೂಡಿಸಿಕೊಂಡಿದ್ದ ಚಿಂತನೆ.

ಅವರು ಹುಟ್ಟಿನಿಂದ, ಓದಿನಿಂದ, ಬೆಳವಣಿಗೆಯಿಂದ ನಿರೀಶ್ವರವಾದಿಯಾಗಿದ್ದರು. ನಾಸ್ತಿಕವಾದಿಯಾಗಿ ಹಿಂದೂ, ಹಿಂದುತ್ವವನ್ನು ವಿರೋಧಿಸುತ್ತಿದ್ದರು. ಅದರ ಪ್ರಮಾಣ ಎಷ್ಟಿತ್ತು ಎಂದರೆ ‘ನನ್ನನ್ನು ಬೇಕಾದರೆ ಕತ್ತೆ ಅಂತ ಕರೆಯಿರಿ, ಆದರೆ ಹಿಂದೂ ಎಂದು ಕರೆಯಬೇಡಿ’ ಎಂದು ನೆಹರು ಖಡಾಖಂಡಿತವಾಗಿ ಹೇಳಿದ್ದಕ್ಕೆ ಉಲ್ಲೇಖಗಳಿವೆ. ಹಿಂದೂ ಚಿಂತನೆ ಕುರಿತು ನೆಹರು ತಿರಸ್ಕಾರ ಭಾವನೆ ಹೊಂದಿದ್ದು ಅವರ ಆಡಳಿತ ನೀತಿಯಲ್ಲಿ ಢಾಳಾಗಿ ಕಾಣಿಸುತ್ತದೆ. ವಿಚಿತ್ರ ಎಂದರೆ ಕಮ್ಯುನಿಸ್ಟ್ ಹಿಂಸೆಯನ್ನು ವಿರೋಧಿಸಿದ ನೆಹರು ಮುಸ್ಲಿಂ ಮೂಲಭೂತವಾದವನ್ನು ಒಪ್ಪಿದರು ಮತ್ತು ಅಪ್ಪಿಕೊಂಡರು. ಅದಕ್ಕೆ ಸ್ಪಷ್ಟ ನಿದರ್ಶನ 1952ರಲ್ಲಿ ಆರ್ಟಿಕಲ್ 370 ಮುಖೇನ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದು. ಆ ಮೂಲಕ ಕಾಶ್ಮೀರವನ್ನು ಭಾರತದ ಒಕ್ಕೂಟದಿಂದಲೇ ಪ್ರತ್ಯೇಕಿಸಲು ಮುಂದಾದದ್ದು. ಮುಂದೆ ಕಾಂಗ್ರೆಸ್ ಈ ಮುಸ್ಲಿಂ ಓಲೈಕೆ ನೀತಿಯನ್ನು ಇಡೀ ದೇಶಕ್ಕೆ ವಿಸ್ತರಣೆ ಮಾಡಿತು. ಅದು ನಮಗೆ ಈಗಂತೂ ಪ್ರತಿ ಹೆಜ್ಜೆ ಹೆಜ್ಜೆಗೂ ಅನುಭವಕ್ಕೆ ಬರುತ್ತಿದೆ.

ಈ ಹೊಂದಾಣಿಕೆ ಮತ್ತೊಂದು ಎಲ್ಲವೂ ಅಧಿಕಾರ ರಾಜಕಾರಣಕ್ಕಾಗಿ. ಅಧಿಕಾರಕ್ಕಾಗಿ ಮತ್ತು ಹೊಂದಾಣಿಕೆಗಾಗಿ ಕಾಂಗ್ರೆಸ್ ಮತ್ತು ಇತರ ಸ್ಯೂಡೋ ಸೆಕ್ಯುಲರ್ ನಾಯಕರು ತಮ್ಮ ಕಾರ್ಯಕರ್ತರ ಪ್ರಾಣವನ್ನೂ ಪಣಕ್ಕಿಡುತ್ತಾರೆ. ಅದಕ್ಕೆ ಜ್ವಲಂತ ನಿದರ್ಶನ ಪಶ್ಚಿಮ ಬಂಗಾಳ ಮತ್ತು ಕೇರಳದ ರಾಜಕಾರಣ. ಪಶ್ಚಿಮ ಬಂಗಾಳದಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮೂರು ಸಾವಿರಕ್ಕೂ ಹೆಚ್ಚು ಸಾಮಾನ್ಯ ಕಾರ್ಯಕರ್ತರು ಕಮ್ಯುನಿಸ್ಟ್ ಪಕ್ಷಗಳ ಗೂಂಡಾಗಳ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಒಂದೂವರೆ ಸಾವಿರ ಕಾರ್ಯಕರ್ತರು ಕಮ್ಯುನಿಸ್ಟ್ ಫ್ಯಾಸಿಸ್ಟ್ ಗೂಂಡಾಗಿರಿಗೆ ಬಲಿ ಆಗಿದ್ದಾರೆ. ಹೀಗೆ ಬಲಿಯಾದ ಎಲ್ಲಾ ಕಾರ್ಯಕರ್ತರು ಹಿಂದೂ ಸಮುದಾಯಕ್ಕೆ ಸೇರಿದವರು. ನೆರೆಯ ಬಾಂಗ್ಲಾದಿಂದ ಒಳನುಸುಳಿ ಬರುವವರೆಲ್ಲ ಮೊದಲು ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವ ಪಡೆದುಕೊಳ್ಳುತ್ತಿದ್ದರು. ನಂತರ ಕಮ್ಯುನಿಸ್ಟ್ ಸರಕಾರ ಅವರಿಗೆ ಇಲ್ಲಿನ ನಿವಾಸಿಗಳ ಐಡೆಂಟಿಟಿ ಕೊಡುತ್ತಿತ್ತು. ಈಗ ಬಂಗಾಳದಲ್ಲಿ ಕಮ್ಯುನಿಸ್ಟರ ಜಾಗದಲ್ಲಿ ತೃಣಮೂಲ ಕಾಂಗ್ರೆಸ್ ಬಂದು ಕೂತಿದೆ. ನುಸುಳುಕೋರರಿಗೆ ಮಾನ್ಯತೆ ಕೊಡುವ ಕೆಲಸವನ್ನು ತೃಣಮೂಲ ಕಾಂಗ್ರೆಸ್ ಸರಕಾರವೂ ಮಾಡುತ್ತಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಸರಕಾರ ಮತ್ತೆ ಹಿಂದೂಗಳು ಮತ್ತು ಹಿಂದೂ ಮಾನಸಿಕತೆ ದಮನದ ಕೆಲಸ ಮಾಡುತ್ತಿದೆ. ತ್ರಿವಳಿ ತಲಾಕ್ ರದ್ದತಿ/ ಆರ್ಟಿಕಲ್ 370 ರದ್ದತಿ/ ಸಿಎಎ ತಿದ್ದುಪಡಿ ಕಾಯಿದೆ ಜಾರಿ/ ವಕ್ಪ್ ತಿದ್ದುಪಡಿ ಕಾಯಿದೆ ಜಾರಿ ವಿರುದ್ಧ ಅತಿ ಹೆಚ್ಚು ಪ್ರತಿರೋಧ, ಹಿಂಸಾಚಾರ ನಡೆದದ್ದು ಅದೇ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ. ಈ ದಂಗೆಗಳಲ್ಲಿ ಸಂಪೂರ್ಣ ಸಂತ್ರಸ್ತರಾದವರು ಹಿಂದೂಗಳು. ದಾಳಿ ನಡೆಸಿದವರ ಜಾತಿ ಅಥವಾ ಮತವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಯಾವ ನೆಹರು ಯಾವ ಕಮ್ಯುನಿಸ್ಟ್ ಧೋರಣೆಯನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೋ ಅದನ್ನು ಯಥಾವತ್ತಾಗಿ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷ ಜಂಟಿ ಮಿಲಾಪಿಯಿಂದ ಕೇರಳ ಮತ್ತು ಬಂಗಾಳದಲ್ಲಿ ಆಚರಣೆಗೆ ತರುತ್ತಿದೆ. ಅದರ ಪರಿಣಾಮವನ್ನು ಊಹಿಸುವುದು ಕಷ್ಟ ಆಗಲಿಕ್ಕಿಲ್ಲ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಓಲೈಕೆಗೋಸ್ಕರ ವಂದೇಮಾತರಂ ಗೀತೆಯಲ್ಲಿ ಭಾರತಮಾತೆಯನ್ನು ದುರ್ಗೆ, ಲಕ್ಷ್ಮೀ, ಸರಸ್ವತೀ ರೂಪದಲ್ಲಿ ಕಾಣುವ ಭಾಗವನ್ನು ಕತ್ತರಿಸಿದವರು, ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರಕಾರ ಶಾಲೆಗಳಲ್ಲಿ ಆರಂಭಿಸಿದ ಸರಸ್ವತೀ ವಂದನೆಯನ್ನು ದೇಶಾದ್ಯಂತ ಹಿಂಸಾತ್ಮಕವಾಗಿ ವಿರೋಧಿಸಿದರು. ಅದರ ಮುಂದುವರಿಕೆಯಾಗಿ ಈಗ ಹದಿನೈದು ದಿನಗಳ ಹಿಂದೆ ಕೇರಳದ ಎರಡು ಮೂರು ಜಿಲ್ಲೆಗಳಲ್ಲಿ ಕೆಲ ಶಾಲೆ ಮತ್ತು ದೇವಸ್ಥಾನಗಳಲ್ಲಿ ಗುರುಪೂರ್ಣಿಮೆಯನ್ನು ಆಚರಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮವನ್ನು ಜರುಗಿಸುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿ ವರದಿ ಆಗಿದೆ. ಈಗಲೂ ಹೀಗಾದರೆ 25-30 ವರ್ಷಗಳ ಹಿಂದಿನ ಸ್ಥಿತಿಗತಿ ಹೇಗಿರಬಹುದು ಎಂಬುದನ್ನು ನಿರೂಪಿಸಲು ಕೇರಳದ ಸದಾನಂದ ಮಾಸ್ಟರ್ ಜೀವಂತ ನಿದರ್ಶನ.

ಸದಾನಂದ ಮಾಸ್ಟರ್ ಮೂಲತಃ ಕಮ್ಯುನಿಸ್ಟ್ ವಿಚಾರಧಾರೆಯ ಕುಟುಂಬಕ್ಕೆ ಸೇರಿದವರು. ಕೆಲಕಾಲ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆ ಎಸ್​ಎಫ್​ಐನ ಸದಸ್ಯ ಕೂಡ ಆಗಿದ್ದರು. ಆದರೆ ಅವರಿಗೆ ಕಮ್ಯುನಿಸ್ಟ್ ಧೋರಣೆ ಸರಿ ಕಾಣದೆ ಸಂಘ ಪರಿವಾರಕ್ಕೆ ಸೇರಿದ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಮೂಲಕ ಬಲಪಂಥೀಯ ವಿಚಾರಧಾರೆಗೆ ಆಕರ್ಷಿತರಾದರು.

ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಬಲಪಂಥೀಯ ಶಿಕ್ಷಕ ಸಂಘಟನೆ ಕಟ್ಟಿದರು. ವಿವಿಧ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕಗಳಲ್ಲಿ ತೊಡಗಿಸಿಕೊಂಡರು. ಅದೇ ಅವರು ಮಾಡಿದ ‘ಮಹಾಪರಾಧ’. 1994ರ ಜನವರಿ 25ರ ರಾತ್ರಿ 8-30ರ ಸಮಯ. ತಂಗಿಯ ಮದುವೆಯ ಆಮಂತ್ರಣ ನೀಡಲು ತೆರಳುತ್ತಿದ್ದ ಸದಾನಂದ ಮಾಸ್ಟರ್ ಅವರನ್ನು ಕಮ್ಯುನಿಸ್ಟ್ ಗೂಂಡಾಗಳು ಕಾರಿನಿಂದ ಹೊರಗೆಳೆದು ಅವರ ಎರಡೂ ಕಾಲುಗಳನ್ನು ಕತ್ತರಿಸಿಹಾಕಿದರು. ಕಮ್ಯುನಿಸ್ಟ್ ಗೂಂಡಾಗಳು ಎಂತಹ ಕಟುಕರು ಎಂದರೆ ಸದಾನಂದ ಮಾಸ್ಟರ್ ಸತ್ತು ಹೋಗಿದ್ದಾರೆಂದು ತಿಳಿದು ಅವರನ್ನು ನಡು ರಸ್ತೆಯಲ್ಲೇ ಬಿಟ್ಟು ತೆರಳಿದರು. ಅದೃಷ್ಟವಶಾತ್ ಬದುಕುಳಿದ ಸದಾನಂದ ಮಾಸ್ಟರ್ ಕೃತಕ ಕಾಲುಗಳನ್ನು ಜೋಡಿಸಿಕೊಂಡು ತಮ್ಮ ಸಮಾಜಮುಖಿ ಕೆಲಸವನ್ನು ಮುಂದುವರಿಸಿದರು. ಅದೇ ಸದಾನಂದ ಮಾಸ್ಟರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುಮು ಈಗ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.

ಜೊತೆಗೆ 2008ರ ಮುಂಬೈ ಭಯೋತ್ಪಾದಕ ದಾಳಿ ಸೂತ್ರಧಾರರಿಗೆ ಗಲ್ಲುಶಿಕ್ಷೆ ವಿಧಿಸಿದ ಖ್ಯಾತ ವಕೀಲ ಉಜ್ವಲ್ ನಿಕಮ್ ಸುಪ್ರಸಿದ್ಧ ಇತಿಹಾಸ ಸಂಶೋಧಕಿ ಪದ್ಮಶ್ರೀ ಮೀನಾಕ್ಷಿ ಜೈನ್ ಅವರೂ ರಾಜ್ಯಸಭೆಗೆ ನಾಮನಿರ್ದೇಶನ ಹೊಂದಿದ್ದಾರೆ. ಇದರಿಂದ ಕಮ್ಯುನಿಸ್ಟ್ ಮತ್ತು ಮೂಲಭೂತವಾದಿ ಶಕ್ತಿಗಳ ದಾಳಿಗಳಿಂದ ಆಘಾತಕ್ಕೊಳಗಾದ ಲಕ್ಷಾಂತರ ಮನಸ್ಸುಗಳು ಕೊಂಚ ನಿರಾಳತೆ ಅನುಭವಿಸುವಂತಾಗಿದೆ. ವಾಸ್ತವ ಏನು ಗೊತ್ತಾ? ಕಮ್ಯುನಿಸಂ ಮತ್ತು ಮೂಲಭೂತವಾದವನ್ನು ನೆಚ್ಚಿಕೊಂಡಿರುವ ಪ್ರಪಂಚದ ಯಾವುದೇ ದೇಶದಲ್ಲಿ ಸಂವಿಧಾನ, ಪ್ರಜಾತಂತ್ರ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಸ್ಪದ ಇದೆಯೇ? ವಿಚಿತ್ರ ಎಂದರೆ ಕಮ್ಯುನಿಸ್ಟ್ ಮತ್ತು ಮೂಲಭೂತವಾದಿ ಶಕ್ತಿಗಳನ್ನು ಎಡಬಲದಲ್ಲಿ ಇಟ್ಟುಕೊಂಡ ರಾಹುಲ್ ಗಾಂಧಿ ಮಾತೆತ್ತಿದರೆ ಸಂವಿಧಾನ ಮತ್ತು ಸಂವಿಧಾನದ ಆಶಯದ ಜಪ ಮಾಡುತ್ತಾರೆ! ಹೇಗಿದೆ ಮರ್ಮ?

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net