

ನವದೆಹಲಿ/ಬರ್ನ್: ಕೆಲ ಭಾರತೀಯರು, ಭಾರತೀಯ ಸಂಸ್ಥೆಗಳು, ಟ್ರಸ್ಟ್ಗಳಿಗೆ ಸ್ವಿಸ್ಬ್ಯಾಂಕ್ ನೋಟಿಸ್ ನೀಡಿದೆ. ಭಾರತದ ಜತೆಗೆ ಬ್ಯಾಂಕ್ ಖಾತೆಯ ಮಾಹಿತಿ ಹಂಚಿಕೊಳ್ಳುವುದರ ಕುರಿತು ತಕಾರರು ಇದ್ದರೆ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಪ್ರತಿನಿಧಿಗಳನ್ನು ನೇಮಿಸುವಂತೆ ಸ್ವಿಸ್ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೇಮನ್ ದ್ವೀಪ, ಪನಾಮಾ, ಬ್ರಿಟಿಷ್ ವರ್ಜಿನ್ ಟ್ರಸ್ಟ್ಗಳ ಮೂಲಕ ಸ್ವಿಸ್ಬ್ಯಾಂಕ್ಗಳಲ್ಲಿ ಖಾತೆ ತೆರೆದು ತೆರಿಗೆ ವಂಚಿಸುವ ಮಾರ್ಗವನ್ನು ಅನೇಕರು ಕಂಡುಕೊಂಡಿದ್ದಾರೆ. ಇಂಥ ಕೆಲವು ಟ್ರಸ್ಟ್ಗಳಿಗೂ ಸ್ವಿಸ್ ಆಡಳಿತ ನೋಟಿಸ್ ನೀಡಿ, ಮೇಲ್ಮನವಿಗೆ ಪ್ರತಿನಿಧಿಗಳನ್ನು ನೇಮಿಸಲು ಆಸಕ್ತಿ ಇದೆಯೇ ಎಂದು ಕೇಳಿದೆ. ಈ ರೀತಿ ನೋಟಿಸ್ ಪಡೆದುಕೊಂಡ ಟ್ರಸ್ಟ್ಗಳ ಪೈಕಿ ಕೇಮನ್ ದ್ವೀಪದ ಪಿ ದೇವಿ ಮಕ್ಕಳ ಟ್ರಸ್ಟ್, ಪಿ ದೇವಿ ಟ್ರಸ್ಟ್, ದಿನೋದ್ ಟ್ರಸ್ಟ್, ಅಗರವಾಲ್ ಕುಟುಂಬ ಟ್ರಸ್ಟ್ಗಳು ಸೇರಿವೆ. ಕೇಮನ್ ದ್ವೀಪ ಮೂಲದ ದೇವಿ ಲಿಮಿಟೆಡ್, ಭಾರತ ಮೂಲದ ಆದಿ ಎಂಟರ್ಪ್ರೖೆಸಸ್ಗೂ ನೋಟಿಸ್ ನೀಡಲಾಗಿದೆ.
ನೋಟಿಸ್ ಪಡೆದುಕೊಂಡ ವ್ಯಕ್ತಿಗಳಲ್ಲಿ ಅತುಲ್ ಪುಂಜ್, ಗೌತಮ್ ಖೇತಾನ್, ಸತೀಸ್ ಕಲ್ರಾ, ವಿನೋದ್ ಕುಮಾರ್ ಖನ್ನಾ, ದುಲ್ಲಭ್ಭಯ್ ಕುರ್ನÌ ವಾಘೇಲಾ, ರೇವಾಬೆನ್ ದುಲ್ಲಭ್ಭಯ್ ಕುರ್ನÌ ವಾಘೇಲಾ ಮತ್ತು ಬಲವಂತ್ಕುಮಾರ್ ದುಲ್ಲಭ್ಭಯ್ ವಾಘೇಲಾ ಇದ್ದಾರೆ. ನೋಟಿಸ್ ಪಡೆದುಕೊಂಡವರ ಪೈಕಿ ಕೆಲವರು ಮೃತರಾಗಿದ್ದು, ಅವರ ವಾರಸುದಾರರಿಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.