

ಗುವಾಹಟಿ: ಅಸ್ಸಾಂನ 9 ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಆಫ್ರಿಕಾದ ಹಂದಿ ಜ್ವರ (ಎಎಫ್ಎಸ್) ಸೋಂಕಿಗೆ 13 ಸಾವಿರಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿವೆ.
ಎಎಸ್ಎಫ್ ಸೋಂಕು ಕಳೆದ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಆರಂಭದಲ್ಲಿ ದಿಬ್ರೂಗಢ, ಶಿವಸಾಗರ, ಜೋರ್ಹಾತ್, ಧಿಮಾಜಿ, ಲಖಿಂಪುರ್, ಬಿಸ್ವನಾಥ್ ಜಿಲ್ಲೆಗಳಲ್ಲಿ ಕಂಡು ಬಂದ ಈ ಸೋಂಕು, ಈಗ ಮಜುಲಿ, ಗೋಲಾಘಾಟ್, ಕಾಮರೂಪ ಜಿಲ್ಲೆಗಳಿಗೂ ಹಬ್ಬಿದೆ. ಕಾಡುಹಂದಿಗಳಿಗೆ ಈ ಸೋಂಕು ತಗುಲದಂತೆ ಎಲ್ಲ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ. ಈ ಕ್ರಮಗಳನ್ನು ಪರಿಶೀಲಿಸಲು ಪಂಶುಸಂಗೋಪನಾ ಸಚಿವ ಅತುಲ್ ಬೋರಾ ಶನಿವಾರ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದರು. ನಾಡಹಂದಿಗಳು ಕಾಡು
ಹಂದಿಗಳ ಸಂಪರ್ಕಕ್ಕೆ ಬಾರದಂತೆ ತಡೆಯಲು ಅರಣ್ಯದ ಗಡಿಯಲ್ಲಿ 6 ಅಡಿ ಆಳದ, ಎರಡು ಕಿ.ಮೀ. ಉದ್ದದ ಕಂದಕವನ್ನು ಅಗೋರಟೋಲಿ ಅರಣ್ಯ ವಲಯದಲ್ಲಿ ತೋಡಲಾಗಿದೆ ಎಂದು ಸಚಿವ ಅತುಲ್ ಬೋರಾ ತಿಳಿಸಿದ್ದಾರೆ. ಮಾರಕವಾಗಿರುವ ಈ ಸೋಂಕನ್ನು ತಡೆಯಲು ರಾಷ್ಟ್ರೀಯ ಹಂದಿ ಸಂಶೋಧನಾ ಕೇಂದ್ರವನ್ನು ಸಂರ್ಪಸುವಂತೆ ರಾಜ್ಯದ ಪಂಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆಗಳಿಗೆ ಸಿಎಂ ಸರ್ಬಾನಂದ ಸೋನೋವಾಲ ಈಗಾಗಲೇ ಸೂಚನೆ ನೀಡಿದ್ದಾರೆ. 2019ರ ಜಾನುವಾರು ಗಣತಿ ಪ್ರಕಾರ, ಅಸ್ಸಾಂನಲ್ಲಿ 21 ಲಕ್ಷ ಹಂದಿ ಗಳಿವೆ. ಈಗ ಇವುಗಳ ಸಂಖ್ಯೆ 30 ಲಕ್ಷಕ್ಕೆ ಏರಿರುವ ಅಂದಾಜು ಇದೆ.