

ಶಿವಮೊಗ್ಗ: ಈಜು ಒಂದು ದಿನಕ್ಕೆ ಸೀಮಿತವಾಗಬಾರದು. ಅದು ದೈನಂದಿನ ಬದುಕಿನ ಅವಿಭಾಜ್ಯ ಕಾರ್ಯವಾಗಬೇಕು ಎಂದು ಡಿಡಿಪಿಐ ಎಸ್.ಆರ್.ಮಂಜುನಾಥ ಹೇಳಿದರು.
ಗೋಪಾಳದ ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ ಹಾಗೂ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಜಿಲ್ಲಾಮಟ್ಟದ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾಮಟ್ಟದ ಈಜು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಲು ಇಂತಹ ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದರು.
ಮಕ್ಕಳಿಗೆ ಕೇವಲ ಅಂಕ ಗಳಿಸುವುದು ಮುಖ್ಯವಲ್ಲ, ಓದಿನ ಜತೆಗೆ ಮಾನಸಿಕ, ಆರೋಗ್ಯ ಸದೃಢತೆ ಕಾಪಾಡಿಕೊಳ್ಳುವಂತಹ ಕ್ರೀಡಾಮನೋಭಾವನೆ ಬೆಳೆಸಿಕೊಳ್ಳಬೇಕು. ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ರೂಪಿಸಲು ಕ್ರೀಡೆ ಸಹಕಾರಿಯಾಗುತ್ತದೆ. ಸರ್ಕಾರ ಕ್ರೀಡಾಪಟುಗಳಿಗೆ ಸಾಕಷ್ಟು ಯೋಜನೆಗಳು ತಂದಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, ಮಕ್ಕಳು ವಿದ್ಯೆಗಷ್ಟೇ ಸೀಮಿತವಾಗದೆ, ಕ್ರೀಡೆ ಮುಖಾಂತರ ಯುವ ಶಕ್ತಿಯನ್ನು ಬೆಳೆಸುವಂತಹ ಒಂದು ಪವಿತ್ರವಾದ ಅಂಗ ಅಂದರೆ ಅದು ಕ್ರೀಡೆ. ಸರ್ಕಾರ ಹೆಚ್ಚು ಹೊತ್ತು ನೀಡಿ ಶಿವಮೊಗ್ಗದಲ್ಲಿ ಅತ್ಯುತ್ತಮ ಮಟ್ಟದ ಈಜುಕೊಳ ಇದಾಗಿದ್ದು, ಸಾರ್ವಜನಿಕರು, ಪಾಲಕರು ಮತ್ತು ಇಲಾಖೆ ಜತೆ ಸಹಕರಿಸಿ ಮಕ್ಕಳು ಸದುಪಯೋಗ ಪಡೆಯುವಂತಹ ಅವಕಾಶ ಕ್ರೀಡಾಪಟುಗಳಿಗೆ ದೊರಕುತ್ತಿದೆ ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ಮಾತನಾಡಿ, ಕ್ರೀಡಾಪಟುಗಳಲ್ಲಿ ಗೆದ್ದೇ ಗೆಲ್ಲುತ್ತೇವೆಂಬ ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ ಜೀವನ ಹಾಗೂ ಕ್ರೀಡೆಯಿಂದ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ವಿದ್ಯಾನಿಕೇತನ ಸಂಸ್ಥೆ ಕಾರ್ಯದರ್ಶಿ ಶೋಭಾ ವೆಂಕಟರಮಣ ಮಾತನಾಡಿ, ಕ್ರೀಡೆ ಪ್ರತಿಯೊಬ್ಬರಿಗೂ ಶಿಸ್ತು ಕಲಿಸುತ್ತದೆ. ಇಲ್ಲಿ ಸೋಲು-ಗೆಲುವು ಸಾಮಾನ್ಯ. ಭಾಗವಹಿಸುವಿಕೆ ಅತ್ಯಂತ ಮುಖ್ಯ. ಕ್ರೀಡಾಪಟು ಎಂದೂ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಕ್ರೀಡೆಯಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬಹುದು ಎಂದರು. ರಾಮಕೃಷ್ಣ ಶಾಲೆಯ ಮುಖ್ಯ ಶಿಕ್ಷಕ ತೀರ್ಥೇಶ್ ಮತ್ತಿತರರು ಉಪಸ್ಥಿತರಿದ್ದರು.