

ಅಮರಾವತಿ: ನಾರಾ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಅಬ್ದುಲ್ ನಜೀರ್ ಅವರು ಚಂದ್ರಬಾಬು ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಇದನ್ನೂ ಓದಿ: ನ್ಯಾಯಲಯ ಆವರಣದಲ್ಲಿಯೇ ಪಾಕ್ ಪರ ಘೋಷಣೆ; ವಕೀಲರಿಂದ ಥಳಿತ
ವಿಜಯವಾಡದ ಕೇಸರಪಲ್ಲಿ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನಸಾಗರದ ನಡುವೆ ಚಂದ್ರಬಾಬು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನಾರಾ ಚಂದ್ರಬಾಬು ನಾಯ್ಡು ನಾನು... ಎಂದು ಹೇಳಿದಾಗ ಅವರ ಕುಟುಂಬದ ಸದಸ್ಯರೆಲ್ಲರೂ ಭಾವುಕರಾಗಿರುವುದು ಕಂಡು ಬಂತು. ಇದೇ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಜೈ ಚಂದ್ರಬಾಬು ಘೋಷಣೆಗಳನ್ನು ಕೂಗಿದರು.
ಅಖಂಡ ಆಂಧ್ರಪ್ರದೇಶದಲ್ಲಿ ಎರಡು ಬಾರಿ ಹಾಗೂ ವಿಭಜಿತ ಆಂಧ್ರಪ್ರದೇಶದಲ್ಲಿ ಒಂದು ಬಾರಿ ಸಿಎಂ ಆಗಿ ಕಾರ್ಯನಿರ್ವಹಿಸಿದ ಅವರು ಇಂದು ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರಧಾನಿ ಮೋದಿ ಅಭಿನಂದನೆ: ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಬಾಬು ಅವರನ್ನು ಪುಷ್ಪಗುಚ್ಛ ನೀಡಿ ಶುಭ ಹಾರೈಸಿದರು.
ಪವನ್ ಪ್ರಮಾಣ ಸ್ವೀಕಾರ: ಸಚಿವರಾಗಿ ಕೊನಿಡೇಲ ಪವನ್ ಕಲ್ಯಾಣ್, ಕೊಲ್ಲು ರವೀಂದ್ರ ,ಅಚ್ಚೆನಾಯ್ಡು , ಚಂದ್ರಬಾಬು ಪುತ್ರ ನಾರಾ ಲೋಕೇಶ್ ಸೇರಿ 24ಮಂದಿ ಪ್ರಮಾಣ ವಚನ ಸ್ವೀಕರಿಸಿದರು. ಸಂಪುಟದಲ್ಲಿ ಹೊಸಬರಿಗೆ ಆದ್ಯತೆ ನೀಡಲಾಗಿದೆ.
ಗಣ್ಯರು ಭಾಗಿ: ಚಂದ್ರಬಾಬು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಜೆಪಿ ನಡ್ಡಾ, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ನಿತಿನ್ ಗಡ್ಕರಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಸಿಜೆಐ ಎನ್ವಿ ರಮಣ, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಕೇಸರಪಲ್ಲಿಯಲ್ಲಿ ಕಾರ್ಯಕ್ರಮ: ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೃಷ್ಣಾ ಜಿಲ್ಲೆಯ ಗನ್ನವರಂನ ಕೇಸರಪಲ್ಲಿ ಗ್ರಾಮವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಇಪ್ಪತ್ತು ಎಕರೆ ಆವರಣದಲ್ಲಿ ಮೂರು ಬೃಹತ್ ಟೆಂಟ್ ಗಳನ್ನು ಹಾಕಲಾಗಿತ್ತು.