

ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ, ಬರಹಗಾರ, ನಟ ರಾಜ್ ಬಿ.ಶೆಟ್ಟಿ ಮತ್ತು ಸಿರಿ ರವಿಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ಟ್ರೇಲರ್ ಇಂದು ಅಧಿಕೃತವಾಗಿ ಅನಾವರಣಗೊಳ್ಳಲಿದೆ.
ಈ ಕುರಿತಂತೆ ಸಿನಿಪ್ರೇಕ್ಷಕರಲ್ಲಿ ಈ ಹಿಂದೆಯಿದ್ದ ನಿರೀಕ್ಷೆ ಈಗ ಮತ್ತಷ್ಟು ಹೆಚ್ಚಾಗಿದೆ. ಇದರ ನಡುವೆ ಚಿತ್ರತಂಡ ವಿಶೇಷವಾಗಿ ಚಿತದ್ರ ಪ್ರಚಾರ ಕಾರ್ಯವೊಂದರಲ್ಲಿ ಭಾಗಿಯಾಗಿದ್ದು, ಖಾಸಗಿ ಹೋಟೆಲ್ನಲ್ಲಿ ನೀರ್ ದೋಸೆ ಹಾಕಿ ಸಂಭ್ರಮಿಸಿದೆ.
ವಿಭಿನ್ನ ರೀತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ "ಸ್ವಾತಿ ಮುತ್ತಿನ ಮಳೆ ಹನಿ" ತಂಡವು ಖಾಸಗಿ ಹೋಟೆಲ್ನ ಸಹಯೋಗದೊಂದಿಗೆ ಸ್ಪೆಷಲ್ ನೀರ್ ದೋಸೆಯನ್ನು ಹಾಕುವ ಮುಖೇನ ಅದನ್ನು ವಿಶೇಷ ರೀತಿಯಲ್ಲಿ ಅನಾವರಣಗೊಳಿಸಿತು.
ಸಿನಿಮಾದ ನಾಯಕ ರಾಜ್ ಬಿ.ಶೆಟ್ಟಿ ಮತ್ತು ನಾಯಕಿ ಸಿರಿ ರವಿಕುಮಾರ್ ಹೋಟೆಲ್ಗೆ ಆಗಮಿಸಿ, ವಿಶೇಷ ನೀರ್ ದೋಸೆಯನ್ನು ಖುದ್ದಾಗಿ ಬಹಿರಂಗಪಡಿಸಿದರು. ಈ ವೇಳೆ ಚಿತ್ರದ ತಾರೆಯರೊಂದಿಗೆ ಹೋಟೆಲ್ನ ಇತರೆ ಸಿಬ್ಬಂದಿಗಳು ಕೂಡ ಪಾಲ್ಗೊಂಡರು.
ಸದ್ಯ ಹಾಡುಗಳ ಮೂಲಕವೇ ಚಿತ್ರಪ್ರೇಮಿಗಳ ಗಮನ ಸೆಳೆದಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಇದೇ ನವೆಂಬರ್ 24 ರಂದು ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ಗೆ ಸಜ್ಜಾಗಿದೆ. ಈ ಚಿತ್ರವನ್ನು ಸ್ಯಾಂಡಲ್ವುಡ್ನ ಮೋಹಕ ತಾರೆ, ನಟಿ ರಮ್ಯ ನಿರ್ಮಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ಮಾಣವಾಗಿದೆ.