

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ತಮ್ಮ ಪೋಸ್ಟ್ಗಳಿಂದಲೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಅವರ ಟ್ವಿಟರ್ ಖಾತೆಯನ್ನು ಕಂಪನಿ ಶಾಶ್ವತವಾಗಿ ಅಮಾನತು ಮಾಡಿರುವುದಾಗಿ ವರದಿಯಾಗಿದೆ.
ಗಾಂಧಿ ಪುಣ್ಮಸ್ಮರಣೆ (ಜನವರಿ 30) ಅಂಗವಾಗಿ ಟ್ವಿಟರ್ನಲ್ಲಿ ನಟಿ ಕೆಲವು ಪೋಸ್ಟ್ಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ಅವರ ಟ್ವಿಟರ್ ಖಾತೆಯನ್ನು ಕಂಪನಿ ಶಾಶ್ವತವಾಗಿ ಅಮಾನತು ಮಾಡಿದೆ. ಈ ಬಗ್ಗೆ ನಟಿ ಸ್ವರಾ ಭಾಸ್ಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ ಅಥವಾ ಎಕ್ಸ್ ಈಗ ತಾನೆ ಗಾಂಧಿ ಪುಣ್ಮಸ್ಮರಣೆಯಂದು ಪೋಸ್ಟ್ ಮಾಡಿದ್ದಕ್ಕಾಗಿ (ಈ ರೀತಿಯ ಪೋಸ್ಟ್ ಮಾಡೋ ಹಾಗಿಲ್ಲ) ನನ್ನ ಅಕೌಂಟ್‌ಅನ್ನು ಶಾಶ್ವತವಾಗಿ ರದ್ದು ಮಾಡಿದೆ ಎಂದು ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಹಿಂದಿಯ ಜನಪ್ರಿಯ ಘೋಷಣೆ ಗಾಂಧಿ, ನಮಗೆ ಅವಮಾನವಾಗುತ್ತಿದೆ ನಿನ್ನ ಕೊಂದವರು ಇನ್ನೂ ಜೀವಂತವಾಗಿದ್ದಾರೆ ಎಂಬ ಪೋಸ್ಟ್ಅನ್ನು ಹಂಚಿಕೊಂಡಿದ್ದರು. ಜತೆಗೆ ತಮ್ಮ ಮಗು ಭಾರತದ ಧ್ವಜವನ್ನು ಹಿಡಿದುಕೊಂಡಿರುವ ಚಿತ್ರವನ್ನು ಶೇರ್ ಮಾಡಿದ್ದರು.
ನನ್ನ ಪೋಸ್ಟ್ ಹೇಗೆ ಹಕ್ಕು ಉಲ್ಲಂಘನೆಯಾಗುತ್ತದೆ? ನನ್ನ ಮಗುವಿನ ಚಹರೆ ಮೇಲೆ ಯಾರು ಹಕ್ಕು ಸಾಧಿಸುವವರಿದ್ದಾರೆ? ಈ ಎರಡು ಅಂಶಗಳ ಮೇಲೆ ನನ್ನ ಖಾತೆ ಸ್ಥಗಿತಗೊಳಿಸಿದ್ದು ನಿಜಕ್ಕೂ ಹಾಸ್ಯಾಸ್ಪದ. ತರ್ಕಬದ್ಧ, ತಾರ್ಕಿಕ ಹಾಗೂ ವಸ್ತುನಿಷ್ಠ ನೆಲಗಟ್ಟಿನಲ್ಲಿ ಇಂಥ ಆರೋಪಗಳು ಕಾನೂನಿನಡಿಯಲ್ಲೂ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗುವುದಿಲ್ಲ ಎಂದು ನಟಿ ಸ್ವರಾ ಭಾಸ್ಕರ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಸದಾ ವಿವಾದಗಳಿಂದಲೇ ಸದ್ದು ಮಾಡುವ ನಟಿ ಸ್ವರಾ ಭಾಸ್ಕರ್ (Swara Bhaskar) ಕೊನೆಯದಾಗಿ ಜಹಾನ್ ಚಾರ್ ಯಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ನಂತರ, ಸ್ವರಾ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಪ್ರಸ್ತುತ, ನಟಿ ಚಲನಚಿತ್ರಗಳಿಂದ ದೂರವಿದ್ದು, ರಾಜಕಾರಣಿ ಫಹಾದ್ ಅಹ್ಮದ್ ಅವರನ್ನು ವಿವಾಹವಾಗಿದ್ದಾರೆ ನಟಿ 2023ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.