

ತಿ.ನರಸೀಪುರ: ಸಮ ಸಮಾಜದ ನಿರ್ಮಾಣಕ್ಕಾಗಿ ಶತಮಾನಗಳ ಹಿಂದೆ ಸ್ಥಾಪನೆಗೊಂಡ ಶರಣರ ಮಠ ಮಾನ್ಯಗಳು ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಹೇಳಿದರು.
ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ತಾಲೂಕಿನ ವಿವಿಧ ಸಂಘ, ಸಂಸ್ಥೆಗಳು ಹಾಗೂ ಸಮುದಾಯದ ಮುಖಂಡರ ಸಹಭಾಗಿತ್ವದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ 75ನೇ ಜನ್ಮದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜನರ ಕಲ್ಯಾಣಕ್ಕಾಗಿ ಮಠಗಳು ಶತಮಾನಗಳಿಂದ ಸೇವೆ ಮಾಡುತ್ತಿವೆ. ಧಾರ್ಮಿಕ ಚಿಂತನೆಗಳು ಮಾತ್ರವಲ್ಲದೇ ದಾಸೋಹ, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿವೆ. ಶ್ರೀ ಕ್ಷೇತ್ರ ವಾಟಾಳು ಮಠವನ್ನು ಕಳೆದ 50 ವರ್ಷಗಳಿಂದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಎಲ್ಲ ವರ್ಗದ ಜನರ ಪ್ರೀತಿ, ಅಭಿಮಾನಗಳನ್ನು ಪಡೆದುಕೊಂಡು ಅವರು ಮಠವನ್ನು ಶ್ರದ್ಧಾಕೇಂದ್ರ ಮಾಡಿದ್ದಾರೆಂದರು.
ವೀರಶೈವ ಮಹಾಸಭಾ ಘಟಕ ಅಧ್ಯಕ್ಷ ತೊಟ್ಟವಾಡಿ ಮಹಾದೇವಸ್ವಾಮಿ ಮಾತನಾಡಿ, ಶ್ರೀಗಳು ಪ್ರತಿಯೊಬ್ಬರನ್ನೂ ತಮ್ಮವರೆಂದು ಕಂಡಿದ್ದಾರೆ. ಜಾತಿ-ಮತ ತಾರತಮ್ಯ ಇಲ್ಲದೇ ಜನತೆಗೆ ಮಾರ್ಗದರ್ಶನ ಮಾಡಿದ್ದಾರೆ. ಎಲ್ಲ ಸಮುದಾಯದ ಮುಖಂಡರೂ ಒಗ್ಗಟ್ಟಾಗಿ ಅವರ ಜನ್ಮದಿನ ಆಚರಣೆ ಮಾಡುತ್ತಾ ಇರುವುದೇ ಇದಕ್ಕೆ ಸಾಕ್ಷಿ ಎಂದರು
ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಮಾತನಾಡಿದರು. ಇದೇ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ, ಅಕ್ಷರ ಫೌಂಡೇಷನ್ ಮುಖ್ಯಸ್ಥ ಆರ್.ಮಂಜುನಾಥ್, ಯೋಧ ಪ್ರಶಾಂತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ಶ್ರೀಗಳನ್ನು ಭಗವಾನ್ ಚಿತ್ರಮಂದಿರದ ವೃತ್ತದಿಂದ ವಿದ್ಯೋದಯ ಕಾಲೇಜು ಆವರಣದವರೆಗೆ ವಿವಿಧ ವೀರಗಾಸೆ, ವೀರಭದ್ರ ಕುಣಿತ, ಗಾರುಡಿಗೊಂಬೆ ಕಲಾತಂಡಗಳೊಂದಿಗೆ ಪೂರ್ಣಕುಂಭ ಸಹಿತ ವೇದಿಕೆಗೆ ಕರೆತರಲಾಯಿತು.
ಮುಡುಕನಪುರ ಹಲವಾರ ಮಠದ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಎನ್ಕೆ ಫೌಂಡೇಷನ್ ಅಧ್ಯಕ್ಷ ಎನ್.ಕೆ. ಫರೀದ್, ಮುಖಂಡರಾದ ಟಿ.ಎಂ.ನಂಜುಂಡಸ್ವಾಮಿ, ಹೆಳವರಹುಂಡಿ ಸೋಮು, ಅನಾಥ ಶವಗಳ ಮುಕ್ತಿದಾತ ಎಂ.ಮಾದೇಶ್, ಸಮಾಜ ಸೇವಕರಾದ ಮಣಿಕಂಠ ರಾಜ್, ಕೆ.ಎನ್. ಪ್ರಭುಸ್ವಾಮಿ, ಜ್ಞಾನೇಂದ್ರ ಮೂರ್ತಿ, ಮೂಗೂರು ಕುಮಾರಸ್ವಾಮಿ, ಸಿದ್ದಲಿಂಗಸ್ವಾಮಿ, ನೃತ್ಯ ನಿರ್ದೇಶಕ ಬಸವರಾಜು ಇತರರು ಭಾಗವಹಿಸಿದ್ದರು.