ಸ್ವಾಮಿ ವಿವೇಕಾನಂದರ ಮಾನವತಾವಾದ

Vivekananda
Published on
ನೂತನ ಯುಗದ ಪ್ರವಾದಿಯಾದ ಸ್ವಾಮಿ ವಿವೇಕಾನಂದರು ಮಾನವನ ಸಂಪೂರ್ಣ ಬೆಳವಣಿಗೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಅವರು ಬರಿಯ ಧಾರ್ವಿುಕ ಮುಖಂಡರಲ್ಲ. ಕಾಷಾಯ ವಸ್ತ್ರ್ತವನ್ನು ಧರಿಸಿ ಸಮಾಜಕ್ಕೆ ವಿಮುಖವಾಗಿ ಗುಹೆಯಲ್ಲಿ ತಮ್ಮ ಮುಕ್ತಿ ಲಾಭಕ್ಕೆ ದುಡಿದವರಲ್ಲ. ಮುಕ್ತಿಯೂ ಸೇರಿದಂತೆ ತಮ್ಮ ಎಲ್ಲಾ ಆಸೆಗಳನ್ನು ಬದಿಗೊತ್ತಿ ಮಾನವನ, ಸಮಾಜದ ಅಭಿವೃದ್ಧಿಗಾಗಿ ಹಗಲಿರಳು ದುಡಿದಂತಹ ಮಾನವ ಪ್ರೇಮಿ. ಅವರೇ ಹೇಳುವಂತೆ, ಬಡವರು ನಮ್ಮ ದೇವರಾಗಲಿ, ಮೂರ್ಖರು ನಮ್ಮ ದೇವರಾಗಲಿ, ಅನಾಥರು ನಮ್ಮ ದೇವರಾಗಲಿ. ನಮ್ಮ ಸುತ್ತಮುತ್ತಲಿರುವ ನಡೆದಾಡುವ, ಜ್ವಲಂತವಾಗಿ ಕಾಣುವ ಮನುಷ್ಯ ದೇವರನ್ನು ಪೂಜಿಸಲು, ಸೇವೆಯನ್ನು ಮಾಡಲು ಸಾಧ್ಯವಾಗದಿದ್ದರೆ, ಎಲ್ಲೋ ಆಕಾಶದ ಹಿಂದೆ ಕುಳಿತಿರುವ ದೇವರನ್ನು ಕಾಣಲು ಅಸಾಧ್ಯ. ಸ್ವಾಮಿ ವಿವೇಕಾನಂದರ ಮಾನವತಾವಾದವು ವೇದಾಂತದ ತಳಹದಿಯನ್ನು ಹೊಂದಿದೆ. ವೇದಗಳ ಅಂತ್ಯದ ಭಾಗವನ್ನು ವೇದಾಂತವೆಂದು ಕರೆಯುವರು. ವೇದಾಂತದ ಪ್ರಕಾರ ಪ್ರತಿಯೊಬ್ಬ ಜೀವಿಯು ಅಮೃತ ಸ್ವರೂಪನು. ಸ್ವರೂಪತಃ ಅವನು ಸತ್-ಚಿತ್-ಆನಂದ.

ಸತ್ ಎಂದರೆ ಪರಿಶುದ್ಧ ಅಸ್ತಿತ್ವ. ಚಿತ್ ಎಂದರೆ ಪರಿಶುದ್ಧ ಜ್ಞಾನ ಮತ್ತು ಆನಂದ ಎಂದರೆ ಪರಿಶುದ್ಧ ಆನಂದ. ಉಪನಿಷತ್ತುಗಳು ಮಾನವನನ್ನು ದೇವರಿಗೆ ಹೋಲಿಸುತ್ತವೆ. ಮಾನವ ಜನ್ಮವನ್ನು ವೇದಾಂತವು ಆತ್ಯಂತ ವಾಗಿ ಕೊಂಡಾಡಿದೆ. ವೇದಾಂತವೂ ಅಧ್ಯಾತ್ಮ ಮಾನವತಾವಾದವನ್ನೇ ತಿಳಿಸುವಲ್ಲಿ ಯಶಸ್ವಿಯಾಗಿದೆ. ಎರಡು ಸಾವಿರ ವರ್ಷಗಳ ಪೂರ್ವದಲ್ಲೇ ಜನಿಸಿದ ವೇದಾಂತವು ಸಮಾನತೆಯನ್ನು ಬೋಧಿಸಿದರೂ ಕಾಲಕ್ರಮೇಣ ಅದರ ಬೋಧನೆಗಳು ಗ್ರಂಥಗಳಿಗೆ ಸೀಮಿತಗೊಂಡು ಅದು ಅನುಷ್ಠಾನ ರೂಪವಾಗಿ ಉಳಿದಿರಲಿಲ್ಲ. ಇದರ ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: ಹಿಂದೂ ಧರ್ಮದಷ್ಟು ಮಾನವನ ಉತ್ಕೃಷ್ಟತೆಯನ್ನು, ಮಹಿಮೆಯನ್ನು ಉಚ್ಛ ರೀತಿಯಲ್ಲಿ ಹೇಳುವಂತೆ ಜಗತ್ತಿನಲ್ಲಿ ಬೇರೆ ಯಾವ ಧರ್ಮವೂ ಬೋಧಿಸುವುದಿಲ್ಲ. ಮತ್ತು ಈ ಜಗತ್ತಿನ ಬೇರೆ ಯಾವ ಧರ್ಮವೂ ಹಿಂದೂ ಧರ್ಮದಷ್ಟು ದೀನದಲಿತರನ್ನು ತುಳಿದಿಲ್ಲ. ಇದು ಧರ್ಮದ ತಪ್ಪಲ್ಲವೆಂದು ನನಗೆ ಭಗವಂತನು ತೋರಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net